ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಕರ್ನಾಟಕ ವಾರ್ತೆ(.ಆ.01): ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತರಾದವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿದರು.
ಮಂಗಳವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಧ್ಯರಾತ್ರಿಯಿಂದಲೇ ಕವಾಡಿಗರಹಟ್ಟಿಯಲ್ಲಿ ಕೆಲವು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಮುಂಜಾನೆಯಿಂದ ಗ್ರಾಮದ ಬಹು ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. 22 ವರ್ಷದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು, ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಶೀಘ್ರವಾಗಿ ಪರಿಹಾರವನ್ನು ಮೃತರ ಕುಟುಂಬದವರಿಗೆ ನೀಡಲಾಗುವುದು.
ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಘಟನೆ ಕಾರಣ ಹಾಗೂ ಸತ್ಯಾಸತ್ಯೆ ತಿಳಿಯಲಿದೆ ಎಂದು ಮಾಧ್ಯಮ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಆಸ್ಪತ್ರೆ ಮಕ್ಕಳ ವಿಭಾಗ, ಯುರಾಲಜಿ, ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯತ್ತಿರುವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರಿಗೆ ಅಸ್ವಸ್ಥರ ಆರೋಗ್ಯ ಸುಧಾರಿಸುವವರೆಗೂ ಚಿಕಿತ್ಸೆ ಮುಂದುವರೆಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ಮತ್ತಿರರು ಇದ್ದರು.