ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ,(ಆ.02) : ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 3 ಜನ ಮೃತರಾಗಿದ್ದು ಜಿಲ್ಲಾಡಳಿತ ಘಟನೆ ಕುರಿತು ಸರ್ಕಾರಕ್ಕೆ ವರದಿ ನೀಡಿ ಮರಣ ಹೊಂದಿದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ಈ ಘಟನೆಗೆ ಕಾರಣರಾದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಬಿ.ಜೆ.ಪಿ ಜಿಲ್ಲಾ ಘಟಕದಿಂದ ಆಗ್ರಹಿಸಲಾಯಿತು.
ನಗರದ ಭಾರತೀಯ ಜನತಾ ಪಾರ್ಟಿಯಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಯಲ್ಲಿ ಕಲುಷಿತ ನೀರು ಸೇವಿಸಿ ಇಲ್ಲಿಗೆ 3 ಜನ ಮೃತರಾಗಿದ್ದು ಸರಿ ಸುಮಾರು 90ಜನ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 15ಜನ ತುರ್ತು ನಿಗಾ ಘಟಕದಲ್ಲಿದ್ದಾರೆ. ಘಟನೆ ನಡೆದು 3 ದಿನ ಆಗುತ್ತಿದೆ. ಸ್ಥಳೀಯ ಶಾಸಕರು ಸೌಜನ್ಯಕ್ಕಾದರು ಘಟನಾ ಸ್ಥಳಕ್ಕೆ ಬೇಟಿ ನೀಡದಿರುವುದು ಈ ಕ್ಷೇತ್ರದ ದುರ್ದೈವದ ಸಂಗತಿ ಎಂದರು.
ಈ ಘಟನೆಯ ಬಗ್ಗೆ ಜಿಲ್ಲಾಡಳಿತ ಸೂಕ್ತವಾದ ತನಿಖೆಯನ್ನು ನಡೆಸುವುದರ ಮೂಲಕ ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಮಾಡಿ ಅವರಿಗೆ ಸೂಕ್ತವಾದ ಶಿಕ್ಷೆಯನ್ನು ಕೂಡಿಸಬೇಕು ಅದಕ್ಕೂ ಮುನ್ನಾ ಇದಕ್ಕೆ ಸಂಬಂಧಿಸಿದಂತೆ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ ಮಾಡಬೇಕು ತದ ನಂತರ ಸರ್ಕಾರದಿಂದ ಮೃತ ಪಟ್ಟವರಿಗೆ ಸೂಕ್ತವಾದ ಪರಿಹಾರವನ್ನು ಕೂಡಿಸಬೇಕು ಎಂದು ನವೀನ್ ಅಗ್ರಹಿಸಿ ಸರ್ಕಾರ ಜನರ ಬದುಕಿನ ಜೊತೆಯಲ್ಲಿ ಚಲ್ಲಾಟವನ್ನು ಆಡುತ್ತಿದೆ. ಸರ್ಕಾರ ನಿರ್ಲಜ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶುದ್ದವಾದ ಕುಡಿಯುವ ನೀರಿನ ಘಟಕಗಳು ನಿಂತು ಹೋಗಿದೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ ಆಧಿಕಾರಿಗಳು ಗಮನ ನೀಡುತ್ತಿಲ್ಲ.
ನಾಗಸಮುದಲ್ಲಿ ಕುಡಿಯವ ನೀರಿನ ಜೊತೆಯಲ್ಲಿ ಕೊಳಚೆ ನೀರು ಸೇರಿದ ಇದರಿಂದ ಹಲವಾರು ಜನತೆಯ ಕಿಡ್ನಿ ನಾಶವಾಗಿದೆ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿ ತನಿಖೆಯನ್ನು ನಡೆಸಬೇಕು ಎಂದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರದಲ್ಲಿಯೂ ಸಹಾ ಇದೇ ರೀತಿ ಅಸ್ವಸ್ಥರಾಗಿ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಲಾಯಿತು. ಈಗ ಚಿತ್ರದುರ್ಗದಲ್ಲಿ 70ಕ್ಕೂ ಹೆಚ್ಚು ಜನ ಅಸ್ಪತ್ರೆಯಲ್ಲಿ ಇದ್ದಾರೆ. ಇದರಲ್ಲಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದಿಂದ ಗ್ರಾಮೀಣ ಭಾಗದ ಜನತೆಗೆ ಶುದ್ದವಾದ ಕುಡಿಯುವ ನೀರನ್ನು ನೀಡಲಾಗುತ್ತಿಲ್ಲ ಎನ್ನುವುದು ದುರಂತವಾಗಿದೆ. ಈ ಬಗ್ಗೆ ಅಧಿಕಾರಿಗಳು ಮಂತ್ರಿಗಳು, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ, ಈ ಘಟನೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆಯಾಗಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಅಧಿಕಾರಿಗಳನ್ನು ಅಮಾನತ್ ಮಾಡಿ ಇದರ ಹಿಂದೆ ಯಾವುದೇ ರೀತಿಯ ಷಡ್ಯಂತ್ರ ಇದ್ದರೆ ಅದನ್ನು ಬಯಲು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಮುಖಂಡರಾದ ಜಯಪಾಲಯ್ಯ, ನವೀನ್ ಚಾಲುಕ್ಯ, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಗರಸಭಾ ಮಾಜಿ ಸದಸ್ಯ ರವಿಕುಮಾರ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯೆ ಶ್ರೀಮತಿ ರೇಖಾ, ಮೋಹನ್, ಸಂಪತ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಜಾ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.