ಸುದ್ದಿಒನ್, ಚಿತ್ರದುರ್ಗ,(ಆ. 02): ನಗರದ ಹೊರವಲಯದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಇದೀಗ ಮೂರಕ್ಕೆ ಏರಿಕೆಯಾಗಿದೆ.
ನಿನ್ನೆ (ಮಂಗಳವಾರ) ನಡೆದ ಈ ದುರ್ಘಟನೆಯಲ್ಲಿ ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ನಂತರ ಅಸ್ವಸ್ಥರ ಸಂಖ್ಯೆ 78 ಕ್ಕೆ ಏರಿಕೆಯಾಗಿದ್ದು, ಇವರೆಲ್ಲರೂ ಜಿಲ್ಲಾ ಆಸ್ಪತ್ರೆ, ನಗರದ ಖಾಸಗಿ ಆಸ್ಪತ್ರೆ, ದಾವಣಗೆರೆ ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸ್ವಸ್ಥರಾದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಲ್ಲಿ ಮಂಜುಳಾ(21) ಎಂಬ ಮಹಿಳೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಿಗ್ಗೆಯೇ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸಂಜೆ ವೇಳೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಘು ಮೃತಪಟ್ಟಿದ್ದರು. ಇಂದು ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರವೀಣ್ ಮೃತಪಟ್ಟಿದ್ದು, ಕವಾಡಿಗರಹಟ್ಟಿಯಲ್ಲಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿಗಳ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಎಸ್.ಪಿ. ಪರುಶುರಾಮ ಅವರು ಮಾತನಾಡಿ, ಲ್ಯಾಬ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.