ಸುದ್ದಿಒನ್, ಚಿತ್ರದುರ್ಗ,(ಆ.29) : ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ವಿದ್ಯಾರ್ಥಿ ವೇತನ ತ್ವರಿತವಾಗಿ ಬಿಡುಗಡೆಮಾಡುವಂತೆ ಆದೇಶಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ನೀಡಿದ ಎಲ್ಲಾ ಕಾರ್ಯಕ್ರಮಗಳನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕಾರ್ಮಿಕ ಸಚಿವರು ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಲಾಡ್ ರವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
2022-23ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ವೇತನ ಇಂದಿನವರೆಗೂ ಜಮಾ ಆಗಿರುವುದಿಲ್ಲ. ತ್ವರಿತವಾಗಿ ನಿಯಮಾನುಸಾರ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಬೇಕು. 18-01-2007 ಪ್ರಕಾರ 1% ಸೆಸ್ ವಸೂಲಿ ಕಾಯ್ದೆ ಸಮಪರ್ಕವಾಗಿ ಜಾರಿಯಾಗಿಲ್ಲದೇ ಇರುವ ಕಾರಣ ಮಂಡಳಿಗೆ ಬರಬೇಕಾದ ಅಂದಾಜು ರೂ.10,000/- ಕೋಟಿ ರೂಪಾಯಿಗಳಷ್ಟು ವಸೂಲಿ ಬಾಕಿ ಇರುತ್ತದೆ.
ರಾಜ್ಯದಲ್ಲಿ ಹಲವಾರು ಸರ್ಕಾರದ ಅಧೀನ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ದೊಡ್ಡ ದೊಡ್ಡ ಬಿಲ್ಡರ್ಸ್‍ಗಳು, ವಿಲ್ಲಾಗಳ ಮಾಲೀಕರು, ಪವನ ವಿದ್ಯುತ್ ಕಂಪನಿಗಳು, ಖಾಸಗಿ ಮೊಬೈಲ್ ಕಂಪನಿಗಳು, ಸೋಲಾರ್ ಕಂಪನಿಗಳು, ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿಗಳಿಗೆ ಸಂಬಂಧಿಸಿದಂತೆ, ಅನೇಕ ಕಟ್ಟಡಗಳನ್ನು ಹಾಗೂ ಸರ್ಕಾರಿ ಕಾಮಗಾರಿಗಳನ್ನು ಹಿಂದಿನ ದಿನಾಂಕದವರೆಗೆ ನಿರ್ವಹಿಸಲಾಗಿರುತ್ತದೆ.
ಆದರೆ ಸೆಸ್ ವಸೂಲಿಯು ಸಮಗ್ರವಾಗಿ ವಸೂಲಿಯಾಗದೇ ಇರುವುದು ನಮ್ಮ ಸಂಘದ ಗಮನಕ್ಕೆ ಬಂದಿರುತ್ತದೆ. ಕಳೆದ ಹತ್ತು ವರ್ಷಗಳಿಂದ ಸೆಸ್‍ನ್ನು ವಸೂಲಿಮಾಡದೇ ಇರುವ ಕಾರಣ ಅನೇಕಬಾರಿ ನಮ್ಮ ಸಂಘದಿಂದ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಆದರೆ ನಮ್ಮ ಮನವಿಗೆ ಯಾವುದೇ ರೀತಿಯ ಮನ್ನಣೆ ನೀಡಲಾಗಿಲ್ಲ. ಆದ್ದರಿಂದ ಸೆಸ್ ವಸೂಲಿ ಪ್ರಾಧಿಕಾರ ರಚನೆಮಾಡಬೇಕೆಂದು ಆಗ್ರಹಿಸಲಾಯಿತು.
ಕೇವಲ ಮಂಡಳಿಯಿಂದ ಬರುವಂತಹ ಸೆಸ್ ಹಣವನ್ನು ಖರ್ಚುಮಾಡುವುದನ್ನು ಹಿಂದಿನ ಸರ್ಕಾರಗಳು ಮಾಡುವ ಕೆಲಸವಾಗಿದೆ. ಸೆಸ್ ವಸೂಲಿಮಾಡುವಂತಹ ಕೆಲಸಗಳು ಮಂಡಳಿಯಿಂದ ಆಗಿರುವುದಿಲ್ಲ. ಆದ್ದರಿಂದ ಸೆಸ್ ವಸೂಲಿ ಪ್ರಾಧಿಕಾರ ಜಾರಿಯಾದಲ್ಲಿ ಮಂಡಳಿಗೆ ನೀರು ಹರಿದು ಬಂದಂತೆ ಮಂಡಳಿಗೆ ಹರಿದು ಬರುತ್ತದೆ.
ನೋಂದಾಯಿತ ಕಟ್ಟಡ ಕಾರ್ಮಿಕರ ನವೀಕರಣಕ್ಕೆ ವೇತನ ಚೀಟಿ ಕಡ್ಡಾಯಮಾಡಿರುವುದು ಸ್ವಾಗರ್ತಾಹವಾಗಿದೆ. ಈ ರೀತಿಯ ಕ್ರಮದಿಂದ ನಕಲಿ ನೋಂದಣಿ ಮಾಡಿಕೊಂಡಿರುವವರ ಗುರುತಿನ ಚೀಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಒಳ್ಳೆಯ ಕ್ರಮವಾಗಿದೆ.
ರಾಜ್ಯದಲ್ಲಿ 44.28 ಲಕ್ಷ ಜನ ಕಟ್ಟಡ ಕಾರ್ಮಿಕರೆಂದು ನೋಂದಾಯಿಸಿಕೊಂಡು ಇದರಲ್ಲಿ ಅರ್ಧಕ್ಕ ಅರ್ಧದಷ್ಟು ಬೋಗಸ್ ಕಾರ್ಮಿಕರಿದ್ದಾರೆ. ವೇತನ ಚೀಟಿ ಕಡ್ಡಾಯ ಮಾಡಿರುವುದರಿಂದ ಬೋಗಸ್ ನೋಂದಣಿಗಳು ಸ್ಥಗಿತವಾಗುತ್ತವೆ. ಈ ಹಿಂದಿನ ಬಿಜೆಪಿ ಸರ್ಕಾರ 2019 ರಿಂದ 2022-23ರವರೆಗೆ ಉಚಿತವಾಗಿ ನೀಡಿರುವ ಎಲ್ಲಾ ಕಾರ್ಯಕ್ರಮಗಳು ಲೂಟಿ ಹೊಡೆಯುವಂತಹ ಕಾರ್ಯಕ್ರಮಗಳಾಗಿದ್ದು, ತನಿಖೆಯಾಗಬೇಕಿದೆ ಎಂದು ಒತ್ತಾಯಿಸಲಾಯಿತು.
ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯ ಎಲ್ಲಾ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಬಂಧ ನೀಲಿನಕ್ಷೆ ರೂಪಿಸಲು ಸಚಿವ ಸಂಪುಟ ತೀರ್ಮಾನಮಾಡಿರುವುದು ಒಳ್ಳೆಯ ಸಂಗತಿಯಾಗಿದೆ.
ಆದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಹ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಗುಡಿಸಲುಗಳಲ್ಲಿ, ಷೆಡ್‍ಗಳಲ್ಲಿ ವಾಸಮಾಡುತ್ತಿದ್ದಾರೆ. ಯಾವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮನೆಗಳಲ್ಲಿವೋ ಅಂತಹವರಿಗೆ ನಿಯಮಾನುಸಾರ ಅರ್ಹತೆ ಮೇರೆಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ರೂ.5.00 ಲಕ್ಷಗಳನ್ನು ನೀಡಬೇಕು.
ನೋಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ ರೂ.5.00 ಲಕ್ಷಗಳನ್ನು ನೀಡಬೇಕು. ಮಹಿಳಾ ಕಾರ್ಮಿಕರಿಗೆ ಬಾಂಡ್ ರೂಪದಲ್ಲಿ ನೀಡುತ್ತಿರುವ ಹೆರಿಗೆ ಭತ್ಯೆ ಸಹಾಯಧವನ್ನು ನಿಲ್ಲಿಸಿ, ನೇರ ನಗದು ವರ್ಗಾವಣೆಮಾಡುವಂತೆ ಆದೇಶಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕನಿಗೆ 60 ವರ್ಷ ತುಂಬಿದ ನಂತರ ಪಿಂಚಣಿ ಸೌಲಭ್ಯನೀಡುತ್ತಿದ್ದು, ತಿಂಗಳಿಗೊಮ್ಮೆ ಸರಿಯಾಗಿ ಹಣವನ್ನು ಅವರ ಖಾತೆಗೆ ಪಾವತಿಮಾಡುವಂತೆ ಕ್ರಮ ಕೈಗೊಳ್ಳಬೇಕು. ಟೈಲ್ಸ್ ಮತ್ತು ಗ್ರಾನೈಟ್ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಬೇಕು ಎಂದು ಆಗ್ರಹಿಸುತ್ತಾ ಮನವಿಯನ್ನು ಸಲ್ಲಿಸಲಾಯಿತು.
ಸೆಸ್ ವಸೂಲಿ ಪ್ರಾಧಿಕಾರ ರಚನೆಮಾಡಬೇಕು.ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮನೆಗಳನ್ನು ಕಟ್ಟಿಕೊಳ್ಳಲು ರೂ.5.00 ಲಕ್ಷ ನೀಡಬೇಕು.ನೋಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ ರೂ.5.00 ಲಕ್ಷ ನೀಡಬೇಕು. ಟೈಲ್ಸ್ ಮತ್ತು ಗ್ರಾನೈಟ್ ಕೆಲಸಗಾರರಿಗೆ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯಾಧ್ಯಕ್ಷರಾದ ಜೆ.ಮಜುನಾಥ ರಾಜ್ಯ ಉಪಾಧ್ಯಕ್ಷರಾದ ಕೆ.ಗೌಸ್‍ಪೀರ್ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ. ಕುಮಾರ್ ರಾಜ್ಯ ಉಪಾಧ್ಯಕ್ಷರಾದ ನರಸಿಂಹಸ್ವಾಮಿ ಎಂ.ಆರ್. ನಾದಿ ಆಲಿ, ರಾಜ್ಯ ಖಚಾಂಚಿ ಈಶ್ವರಪ್ಪ, ರಾಜ್ಯ ನಿರ್ದೇಶಕರಾದ ಫೈರೋಜ್ ಪ್ರಸನ್ನ ಗೌಸ್ ಖಾನ್ ರಾಜಣ್ಣ ತಿಮ್ಮಯ್ಯ ಎಂ. ರಾಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.