ಹೆಚ್.ಡಿ.ಪುರದಲ್ಲಿ ಹತ್ತು ಕೋಟಿ ರೂ.ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಶಾಸಕ ಎಂ.ಚಂದ್ರಪ್ಪ

suddionenews
3 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.21): ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಆಗದೆ ಎಷ್ಟೋ ಮಂದಿ ಬಡವರು ಪ್ರಾಣ ಕಳೆದುಕೊಂಡಿರುವುದನ್ನು ಗಮನಿಸಿ ಹತ್ತು ಕೋಟಿ ರೂ.ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಲಾಗುವುದು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಆರು ಆಸ್ಪತ್ರೆ ಮಂಜೂರಾಗಿದ್ದು, ಅದರಲ್ಲಿ ಹೆಚ್.ಡಿ.ಪುರ ಕೂಡ ಒಂದು. ಹೊಳಲ್ಕೆರೆ, ಶಿವಪುರ, ಎನ್.ಜಿ.ಹಳ್ಳಿ, ಗೌಡಿಹಳ್ಳಿ, ಚಿತ್ರಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ಬೆಂಗಳೂರು, ದಾವಣಗೆರೆ, ಮಣಿಪಾಲ್, ಶಿವಮೊಗ್ಗಕ್ಕೆ ಹೋಗಿ ಇಲ್ಲಿನ ಹಳ್ಳಿ ಜನ ಚಿಕಿತ್ಸೆ ಪಡೆಯಲು ಸಾಧ್ಯವಾ ಎಂದು ಜನತೆಯನ್ನು ಪ್ರಶ್ನಿಸಿದ ಶಾಸಕ ಎಂ.ಚಂದ್ರಪ್ಪ ಜಿಲ್ಲಾ ಆಸ್ಪತ್ರೆಯಲ್ಲಿ ದೊರಕುವ ಎಲ್ಲಾ ರೀತಿಯ ಚಿಕಿತ್ಸೆಗಳು ಇಲ್ಲಿ ಸಿಗಲಿದೆ. ಸಿಟಿ ಸ್ಕ್ಯಾನಿಂಗ್, ಎಂ.ಆರ್.ಐ. ಇ.ಸಿ.ಜಿ. ಡಯಾಲಿಸಿಸ್, ಎಕ್ಸರೆ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುವುದು. ಅದಕ್ಕಾಗಿ ಆರು ವೈದ್ಯರು, 25 ನರ್ಸ್‍ಗಳನ್ನು ನೇಮಕ ಮಾಡಲಾಗಿದೆ. ಸುತ್ತಮುತ್ತಲಿನ ಹಳ್ಳಿ ಜನಕ್ಕೆ ಇದರಿಂದ ಅನುಕೂಲವಾಗಲಿ ಎನ್ನುವುದು ನನ್ನ ಆಸೆ ಎಂದು ಹೇಳಿದರು.

ಇಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಹೊಳಲ್ಕೆರೆಯಲ್ಲಿ ಮಿನಿ ವಿಧಾನಸೌಧ ಕಟ್ಟಲಾಗಿದೆ. ಹತ್ತು ಕೋಟಿ ರೂ.ನಲ್ಲಿ ಈಜುಕೊಳ, ಐದು ಕೋಟಿ ರೂ.ವೆಚ್ಚದಲ್ಲಿ ಇನ್‍ಡೋರ್ ಸ್ಟೇಡಿಯಂ, ನಗರಸಭೆ, ಎಲ್.ಕೆ.ಜಿ.ಯಿಂದ ಹಿಡಿದು ಪದವಿವರೆಗೆ ಒಂದೆ ಸೂರಿನಡಿ ಶಿಕ್ಷಣ ಮಕ್ಕಳಿಗೆ ದೊರಕಿಸಲು ಕಟ್ಟಡ ಕಟ್ಟಲಾಗಿದೆ. ಹೆಚ್.ಡಿ.ಪುರ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಚಿಕಿತ್ಸೆಗಾಗಿ ಒಂದು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಿಲ್ಪ ಪ್ರಕಾಶ್, ಉಪಾಧ್ಯಕ್ಷೆ ಶ್ರೀಮತಿ ಓಬಳಮ್ಮಸ್ವಾಮಿ, ಚಂದ್ರಪ್ಪ, ಎಲೆ ರಾಜಪ್ಪ, ನಾಗರಾಜ್, ಎಸ್.ಎಂ.ಆರ್.ರಾಜಪ್ಪ, ಈಶ್ವರಪ್ಪ, ಓಬಳೇಶ್, ಜಿ.ಎನ್.ಶೇಷಾದ್ರಿ, ಎಚ್.ಡಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿ, ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಚಂದ್ರಪ್ಪ, ಜಯಣ್ಣ, ಸತೀಶ್, ರಾಮಣ್ಣ, ಜಯಮ್ಮ, ಪರಮೇಶ್ವರಪ್ಪ, ಪ್ರಕಾಶ್, ಪ್ರವೀಣ್, ರಾಮಚಂದ್ರಪ್ಪ, ಜಗದೀಶ್, ಸತೀಶ್, ಕಿರಣ, ಗಿರೀಶ್, ಬಿ.ಎಸ್.ಮಲ್ಲಿಕಾರ್ಜುನ್, ಗ್ರಾಮ ಪಂಚಾಯಿತಿ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.
______________________________________

ಚಿತ್ರದುರ್ಗ: ನಿಮ್ಮ ಸಮಸ್ಯೆ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡುವುದಕ್ಕಾಗಿ ಎಲ್ಲಾ ಇಲಾಖೆ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ.
ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.

 

 

ಹೊಳಲ್ಕೆರೆ ತಾಲ್ಲೂಕಿನ ಸಾಂತೇನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ರೇಷನ್ ಕಾರ್ಡ್, ಖಾತೆ ಬದಲಾವಣೆ, ಬೆಳೆ ಪರಿಹಾರ, ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ದೊರಕುವ ವಿವಿಧ ಸೌಲಭ್ಯಗಳು ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಕುರಿತು ಸರ್ಕಾರ ತೀರ್ಮಾನ ಮಾಡಿರುವುದರಿಂದ ಸಾಂತೇನಹಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮನೆಯ ಹಿರಿಯರ ಹೆಸರಿನಲ್ಲಿರುವ ಖಾತೆಗಳು ಮಕ್ಕಳ ಹೆಸರಿಗೆ ಆಗಿರುವುದಿಲ್ಲ. ಪೌತಿ ಖಾತೆಗಳ ಬದಲಾವಣೆ, ಅಣ್ಣ ತಮ್ಮಂದಿರು ಬೇರೆ ಬೇರೆಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆಯಾಗಬೇಕಿದೆ. ಗರ್ಭಿಣಿ ಸ್ತ್ರೀಯರಿಗೆ ವಿಶೇಷ ಸೌಲಭ್ಯ ಕೊಡುವ ಅವಕಾಶವಿದೆ. ಹಾಗಾಗಿ ನಿಮ್ಮ ಕಷ್ಟ-ಸುಖಗಳನ್ನು ಆಲಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡಿರುವುದಿಲ್ಲ. ಉದಾಸೀನ ಮಾಡುವುದುಂಟು. ಎಷ್ಟೋ ಮಂದಿಗೆ ಸಕ್ಕರೆ ಕಾಯಿಲೆ. ರಕ್ತದೊತ್ತಡ ಇರುವುದು ಗೊತ್ತಿರುವುದಿಲ್ಲ. ಅದಕ್ಕಾಗಿ ಆರೋಗ್ಯ ಇಲಾಖೆಯಿಂದ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಬಂದಿದ್ದಾರೆ. ತಪಾಸಣೆ ಮಾಡಿಸಿಕೊಂಡು ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡಾಗ ಮುಂದೆ ದೊಡ್ಡದಾಗಿ ಪರಿಣಮಿಸುವುದಿಲ್ಲ. ಬೆಂಗಳೂರು, ಮಣಿಪಾಲದಲ್ಲಿ ದೊರಕುವ ಹೈಟೆಕ್ ಚಿಕಿತ್ಸೆಗಳು ಹೊಳಲ್ಕೆರೆಯಲ್ಲಿ ಸಿಗಲಿ ಎನ್ನುವ ಕಾರಣಕ್ಕಾಗಿ 31 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿ ವೈದ್ಯರುಗಳನ್ನು ನಿಯೋಜಿಸಲಾಗಿದೆ. ರಸ್ತೆಗೆ 75 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದೇನೆ. ಇನ್ನೊಂದು ತಿಂಗಳಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದರು.

ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನತೆಯಿಂದ ಅಹವಾಲುಗಳನ್ನು ಸ್ವೀಕರಿಸಿ ಕುಂದುಕೊರತೆಗಳಿಗೆ ಆದ್ಯತೆ ನೀಡಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಎಂ.ಚಂದ್ರಪ್ಪ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.

ಹೊಳಲ್ಕೆರೆ ತಹಶೀಲ್ದಾರ್ ಶ್ರೀಮತಿ ರೇಖಾ ಟಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್‍ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ, ಉಪಾಧ್ಯಕ್ಷ ಕೆ.ಶಿವಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎ.ಬಂಗಾರಪ್ಪ, ಹನುಮಂತಪ್ಪ, ಶ್ರೀಮತಿ ಸುನಿತಾ, ಶ್ರೀಮತಿ ಲೀಲಾವತಿ, ಲೋಕೇಶಪ್ಪ, ಕಂದಾಯ ಇಲಾಖೆ ಹಾಗೂ ಹೊಳಲ್ಕೆರೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗರ್ಭಿಣಿ ಸ್ತ್ರೀಯರಿಗೆ ಸೀಮಂತ ನೆರವೇರಿಸಲಾಯಿತು.

 

 

Share This Article
Leave a Comment

Leave a Reply

Your email address will not be published. Required fields are marked *