ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಾಣ : ಭಕ್ತರ ತೀರ್ಮಾನಕ್ಕೆ ಬದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

2 Min Read

 

ವರದಿ ಮತ್ತು ಫೋಟೋ ಕೃಪೆ

ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.05): ಹತ್ತಾರು ಕೋಟಿ ರೂ.ಬೆಲೆ ಬಾಳುವ ಜಾಗದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ನೀವುಗಳೆಲ್ಲಾ ಚರ್ಚೆ ಮಾಡಿ ಒಮ್ಮತವಾಗಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

ಚಳ್ಳಕೆರೆ ರಸ್ತೆಯಲ್ಲಿರುವ ಶನೈಶ್ವರಸ್ವಾಮಿ ದೇವಸ್ಥಾನದ ಸಮೀಪ ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಾಣಗೊಳ್ಳುವುದರ ಸಂಬಂಧ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆ ಹಾಗೂ ನೀಲಿನಕ್ಷೆ ಬಿಡುಗೆಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇವಸ್ಥಾನ ನಿರ್ಮಾಣಕ್ಕೆ 12 ರಂದು ಭೂಮಿಪೂಜೆ ನೆರವೇರಲಿದೆ. ಧಾರ್ಮಿಕ ಕೆಲಸಗಳಲ್ಲಿ ಪೂರ್ಣ ಪ್ರಮಾಣದ ಹಣ ಸಂಗ್ರಹವಾಗುವುದು ಕಷ್ಟ. ದೇವಸ್ಥಾನ ಕಟ್ಟುತ್ತ ಹೋದಂತೆ ಭಕ್ತರು ಹಣ ನೀಡಲು ಮುಂದೆ ಬರುತ್ತಾರೆ. ಒಂದು ಕಾಲು ಎಕರೆ ಜಮೀನಿನಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣವಾಗಲಿದೆ. ಕೇಂದ್ರದಿಂದ ನಾಲ್ಕು ಕೋಟಿ ರೂ. ಬಂದಿದೆ. ಒಂದೆ ಪಾರ್ಕಿಗೆ ತೊಂಬತ್ತು ಲಕ್ಷ ರೂ.ಗಳನ್ನು ಖರ್ಚು ಮಾಡಬೇಕೆಂಬ ಷರತ್ತು ವಿಧಿಸಿದೆ.

ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಉದ್ಯಾನವನ ನಿರ್ಮಾಣ ಮಾಡಬಹುದು ಎಂದುಕೊಂಡಿದ್ದೆ. ಆದರೆ ಅಲ್ಲಿ ಪಾರ್ಕ್ ನಿರ್ಮಾಣಕ್ಕೆ ಜಾಗವಿಲ್ಲದ ಕಾರಣ ಈ ಹಣ ಬಳಸಲು ಅವಕಾಶವಿಲ್ಲ ಎಂದರು.

ಬಾವಿ, ಹೊಂಡ, ಕೆರೆಗಳ ಅಭಿವೃದ್ದಿಗೆ ಒಂದು ಕೋಟಿ ಹಣ ಬಂದಿದೆ. ದೇವಸ್ಥಾನದ ಸುತ್ತಮುತ್ತ ಪಾರ್ಕ್ ಆಗಿದ್ದರೆ ಚನ್ನಾಗಿರುತ್ತಿತ್ತು. ಮುಂದೆ ನೋಡೋಣ. ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು. ನೀವುಗಳೆಲ್ಲಾ ಚರ್ಚಿಸಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಸಿದ್ದನಿದ್ದೇನೆ ಎಂದು ಹೇಳಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ ಮಾತನಾಡಿ ಕಳೆದ ಎಂಟು ವರ್ಷಗಳ ಹಿಂದೆ ಇದೆ ರೀತಿ ಪೂರ್ವಭಾವಿ ಸಭೆ ನಡೆದಿತ್ತು.

ಶಿರಡಿಯಲ್ಲಿರುವಂತೆ ತದ್ರೂಪಿಯಾಗಿ ಇಲ್ಲಿ ಅಂದಾಜು ಹತ್ತು ಕೋಟಿ ರೂ.ಗಳ ವೆಚ್ಚದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಾಣ ಮಾಡಲಾಗುವುದು. ಅದಕ್ಕಾಗಿ ಇದೆ ತಿಂಗಳ 12 ರಂದು ಭೂಮಿಪೂಜೆ ನಡೆಯಲಿದೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ತೇಜಸ್ವಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರ್ಯವೈಶ್ಯ ಸಂಘದ ಮಾಜಿ ಅಧ್ಯಕ್ಷ ಕಾಶಿವಿಶ್ವನಾಥಶೆಟ್ಟಿ, ನಟರಾಜಶೆಟ್ಟಿ, ಸಂಜೀವಮೂರ್ತಿ, ಹಂಜಿ ಶಿವಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಸದಸ್ಯರುಗಳಾದ ಹರೀಶ್, ಜಯಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್ ಇವರುಗಳು ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *