ಚಿತ್ರದುರ್ಗ, ಸೆಪ್ಟೆಂಬರ್, 23 : ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177 ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕು. ಆದರೆ ಕಳೆದ ವರ್ಷ 600 ಟಿಎಂಸಿ ನೀರು ವೃಥಾ ಹರಿದು ಸಮುದ್ರ ಸೇರಿದೆ. ಹೆಚ್ಚುವರಿ ನೀರು ಸಂಗ್ರಹಕ್ಕೆ ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬದ್ದರಾಗಿದ್ದಾರೆ. ಮೇಕದಾಟು ಅಣೆಕಟ್ಟು ನಿರ್ಮಾಣವೇ ಕಾವೇರಿ ನದಿ ನೀರು ಸಮಸ್ಯೆ ಪರಿಹಾರವಾಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಶನಿವಾರ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31ನೇ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ನೀರು ಇಲ್ಲದ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಆದೇಶ ನಮಗೆ ಉರುಳಾಗಿದೆ. ಸರ್ಕಾರ ರಾಜ್ಯದ ರೈತರ ಹಿತ ಕಾಯಲು ಬದ್ದವಾಗಿದೆ. ಮೇಕೆದಾಟು ಯೋಜನೆಯಿಂದ 67 ಟಿಎಂಸಿ ನೀರು ರಾಜ್ಯದಲ್ಲಿ ಸಂಗ್ರಹವಾಗಲಿದೆ. ಸುಪ್ರಿಂ ಕೋರ್ಟ್ ಸಹ ಮೇಕೆದಾಟು ಯೋಜನೆಗೆ ಜಾರಿಗೆ ಸಲಹೆ ನೀಡಿದೆ. ತಮಿಳುನಾಡು ಸಹ ಹೆಚ್ಚುವರಿ ನೀರು ಸಂಗ್ರಹಿಸಲು ಸಹ ಮೆಟ್ಟೂರು ಬಳಿ ಇನ್ನೊಂದು ಅಣೆಕಟ್ಟು ನಿರ್ಮಿಸಬಹುದು. ಇದರಿಂದ ಹೆಚ್ಚು ಮಳೆಯಾದ ಸಂದರ್ಭದಲ್ಲಿ ನೀರುವ ಸಂಗ್ರಹಿಸಿ, ಬರಗಾಲ ಸಂದರ್ಭದಲ್ಲಿ ಉಪಯೋಗಿಸಬಹುದು. ಇದರಿಂದ ಕಾವೇರಿ ಸಮಸ್ಯೆಗೆ ಪರಿಹಾರಕ್ಕೆ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.
ಈ ದಿನ ಶ್ರೇಷ್ಠವಾದದ್ದು, ಹಲವಾರು ಬಾರಿ ಸಿರಿಗೆರೆ ಮಠಕ್ಕೆ ಆಗಮಿಸಿದ್ದೇನೆ. ಕೇಂದ್ರದಲ್ಲಿ ಹೆದ್ದಾರಿ ಸಚಿವನಿದ್ದಾಗ ಮಠಕ್ಕೆ ಸಂಪರ್ಕಿಸುವ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಹಾದ್ವಾರ ನಿರ್ಮಿಸಲು ಅನುಮತಿ ನೀಡಿದ್ದನ್ನು ಸ್ವಾಮೀಜಿಗಳು ನೆಪಿಸಿಕೊಂಡರು. ಸಿರಿಗರೆ ಮಠ ಬಸವಣ್ಣ ಚಿಂತನೆಯನ್ನು ಅಕ್ಷರ ಸಹ ಅನುಸರಿಸುತ್ತಿರ ಕ್ರಾಂತಿಕಾರ ಮಠವಾಗಿದೆ. ಲಿಂಗಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಬಸವಣ್ಣ ತತ್ವದ ಹಾಗೇ ಸಮಾಜದ ಎಲ್ಲಾ ಜನರ ಉದ್ಧಾರಕ್ಕೆ ಶ್ರಮಿಸಿದರು.
850 ವರ್ಷಗಳ ಇತಿಹಾಸ ಇರುವ ಶ್ರೀ ಮಠ, ಇಂದಿಗೂ 12 ಶತಮಾನದ ಪರಂಪರೆ ಉಳಿಸಿಕೊಂಡು ಬಂದಿದೆ. ಚಿಕ್ಕಂದಿನಲ್ಲಿ ಓದುವಾಗ ಬುದ್ದ ಬಸವಣ್ಣ ಅಂಬೇಡ್ಕರ್, ಗಾಂಧಿ ತ್ಯಾಗವನ್ನು ನೆನದು ರೋಮಾಂಚನಗೊಂಡಿದ್ದೆ. ಬಸವಣ್ಣ 12ನೇ ಶತಮಾನದಲ್ಲಿ ಸಮಾನತೆಯ ತತ್ವವನ್ನು ಪ್ರತಿಪಾದಿಸಿದ್ದರು. ಸ್ವತಂತ್ರ ಪೂರ್ವದಲ್ಲಿ ಶಾಲೆಗಳನ್ನು ತೆರದು ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ಶ್ರೀಮಠ ನೀಡಿದೆ. ಈ ಭಾಗದಲ್ಲಿ ನೀರಾವರಿ ಕೆಲಸ ಕೈಗೊಳ್ಳಲು ಸ್ವಾಮೀಜಿಗಳು ಮಾಡಿದ ಕಾರ್ಯ ಇತಿಹಾಸ ಪುಟದಲ್ಲಿ ಸ್ಮರಣೀಯವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಒದಗಿಸಿದರು.
ಈಗಲೂ ಸರ್ಕಾರ ಕುಡಿಯುವ ನೀರಿನ ಯೋಜನೆಗಳ ಜಾರಿಗೆ ಬದ್ದವಿದೆ. ಎತ್ತಿನ ಹೊಳೆ ಯೋಜನೆ ಈ ವರ್ಷವೇ ಪೂರ್ಣಗೊಳ್ಳಲಿದೆ. ರಾಜ್ಯ ಸರ್ಕಾರ ನೀರಾವರಿ ವಿಚಾರದಲ್ಲಿ ಸಿರಿಗೆರೆ ಶಿವಮೂರ್ತಿ ಸ್ವಾಮೀಜಿಗಳ ಪ್ರೇರಣೆಯಾಗಿ ಸ್ವೀಕರಿಸಿ ಕೆಲಸ ನಿರ್ವಹಿಸಲಿದೆ. ಸ್ವಾಮೀಜಿಗಳ ಕೋರಿಕೆಯಂತೆ ಮಠದ ದಾಸೋಹಕ್ಕೆ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ದವಸ ಧಾನ್ಯಗಳನ್ನು ನೀಡಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣುಪ್ರಕಾಶ್ ಪಾಟೀಲ್ ಮಾತನಾಡಿ, ವಿಶೇಷವಾಗಿ ಪರಮಪೂಜ್ಯ ಶಿವಕುಮಾರ ಶಿವಾಚಾರ್ಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಾವೆಲ್ಲಾ ಭಕ್ತಿಯಿಂದ ಪಾಲ್ಗೊಂಡಿದ್ದೇವೆ. ನಾಡಿಗೆ 12ನೇ ಶತಮಾನದ ಶರಣರ ಕೊಡುಗೆ ಅಪಾರ. ಕರ್ನಾಟಕ ರಾಜ್ಯ ಶಾಂತಿ ಹಾಗೂ ಸಮೃದ್ದಿಯಿಂದ ನೆಲೆಸಿರಲು ಕಲ್ಯಾಣದ ಮಹಾಕ್ರಾಂತಿ ಕಾರಣ. ಮನುಷ್ಯ ಜೀವನಕ್ಕೆ ವಚನಗಳ ಮೂಲಕ ಶಿವಶರಣರು ದಾರಿ ದೀಪ ತೋರಿದ್ದಾರೆ. ಜಾತಿ ವ್ಯವಸ್ಥೆ ವಿರುದ್ಧವಾಗಿ ಹೋರಾಡಿ ಸಮಾನತೆ ಮೂಡಿಸಿದ್ದಾರೆ. ಬಸವಾದಿ ಶರಣರ ತತ್ವಾದರ್ಶಗಳ ಅಳವಡಿಸಿಕೊಂಡು ಸಿರಿಗೆರೆ ಮಠದ ಶ್ರೀಗಳು ಸಮಾಜ ಸೇವೆ ಮುಂದುವರೆಸಿದ್ದಾರೆ.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿಗೆ ಶಿಕ್ಷಣ ಮುಖ್ಯ. ತರಳಬಾಳು ಸಂಸ್ಥೆ 250 ಶೈಕ್ಷಣಿಕ ಸಂಸ್ಥೆಗಳ ಮೂಲಕ ಈ ಆಶಯ ಈಡೀರಿಸಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಾ ಉತ್ತಮ ಶಿಕ್ಷಣ ನೀಡಿದ್ದಾರೆ. ಇದರಿಂದ ನಾಡಿನಲ್ಲಿ ಪ್ರಗತಿ ಕಂಡುಬಂದಿದೆ. ಸಮಾಜದ ಎಲ್ಲಾ ವರ್ಗಗಳನ್ನು ಅಪ್ಪಿಕೊಂಡು ಸೌಹಾರ್ದ ಬದುಕಿಗೆ ಸಿರಿಗೆರೆ ಶ್ರೀಗಳು ಮಾದರಿಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಪೂಜ್ಯ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಹೊಳಲ್ಕರೆ ಶಾಸಕ ಡಾ.ಎಂ.ಚಂದ್ರಪ್ಪ, ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಿಮ್ಮಯ್ಯ, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ರೈತ ಹೋರಾಟಗರ ಬಸವರಾಜ ಶ್ರೀಮಠದ ಆಡಳಿತಾಧಿಕಾರಿಗಳಾದ
ಎಸ್.ಬಿ.ರಂಗನಾಥ, ವಾವದೇವಪ್ಪ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.