ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಜಾಗದಲ್ಲಿ ನೂತನ ವೈದ್ಯಕೀಯ ಕಾಲೇಜು ಸಂಕೀರ್ಣ ನಿರ್ಮಾಣ : ಸಚಿವ.ಡಾ.ಶರಣ ಪ್ರಕಾಶ ಆರ್. ಪಾಟೀಲ್

4 Min Read

 

 

ಸುದ್ದಿಒನ್, ಚಿತ್ರದುರ್ಗ,(ಆ.26) :ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂ.ಸಿ) ಪ್ರಸ್ತುತ 2023-24ನೇ ಸಾಲಿನಿಂದಲೇ 150 ಎಂ.ಬಿ.ಬಿ.ಎಸ್ ಸೀಟಿನೊಂದಿಗೆ ಪ್ರವೇಶಾತಿ ನೀಡಲು ಅನುಮತಿ ನೀಡಿದೆ. ಈಗಾಗಲೇ 26 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ದಾವಣಗೆರೆ ವಿ.ವಿ.ಯ ಗುಡ್ಡದರಂಗವ್ವನಹಳ್ಳಿ ಸ್ನಾತಕೋತ್ತರ ಜ್ಞಾನಗಂಗೋತ್ರಿ ಆವರಣದಲ್ಲಿ ಪ್ರಥಮ ವರ್ಷದ ಬೋಧನೆ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ದಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್ ಪಾಟೀಲ್ ಹೇಳಿದರು.

ಶನಿವಾರ ನಗರದ ಜಿಲ್ಲಾ ಪಂಚಾಯತಿ ಮಿನಿ ಸಭಾಂಗಣದಲ್ಲಿ ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕಳೆದ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆಯಲಾಗಿದೆ. ಸದ್ಯ ನಿರ್ಮಾಣದ ಕೆಲಸ ಆರಂಭವಾಗಬೇಕಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದು. ತಾತ್ಕಾಲಿಕ ಹಾಗೂ ಪರ್ಯಾಯವಾಗಿ ದಾವಣಗೆರೆ ವಿ.ವಿ. ಅವರು ಜ್ಞಾನಗಂಗೋತ್ರಿ ಆವರಣದಲ್ಲಿ ನೀಡಿರುವ ಕಟ್ಟಡದಲ್ಲಿ, ಪ್ರಯೋಗಾಲಯವನ್ನು ಸ್ಥಾಪಿಸಿ ಪ್ರಥಮ ವರ್ಷದ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದರು.

ಸದ್ಯ ಇರುವ ಜಿಲ್ಲಾ ಆಸ್ಪತ್ರೆ ಆವರಣದಲ್ಲಿಯೇ ನೂತನ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಿಸಲು ಎಲ್ಲಾ ಜನಪ್ರತಿನಿಧಿಗಳು ಒಲವು ತೋರಿದ್ದಾರೆ. ವಿಸ್ತೃತ ಯೋಜನಾ ವರದಿಯು ಸಿದ್ದವಾಗಿದೆ. ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡತೆ ಇರುವ ಸರ್ಕಾರಿ ನರ್ಸಿಂಗ್ ಕಾಲೇಜು ಮತ್ತು ಹಾಸ್ಟೆಲ್‌ನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಪ್ರಸ್ತುತ ಜಿಲ್ಲಾ ಆಸ್ಪತ್ರೆ 450 ಬೆಡ್ ಹೊಂದಿದೆ. ಇದರ ಜೊತೆಗೆ ನೂತನ ವೈದ್ಯಕೀಯ ಕಾಲೇಜು ನಿರ್ಮಾಣದ ಯೋಜನೆಯಲ್ಲಿ 150 ಬೆಡ್ ಆಸ್ಪತ್ರೆ ನಿರ್ಮಾಣ, ನರ್ಸಿಂಗ್ ಕಾಲೇಜು, ಬೊಧನೆ ಹಾಗೂ ವಸತಿ ನಿಲಯಗಳನ್ನು ಸಹ ನಿರ್ಮಿಸಲಾಗುವುದು ಎಂದರು.

ಬೋಧನಾ ಸಿಬ್ಬಂದಿ ನೇಮಕ ಹಾಗೂ ಪರಿಕರ ಖರೀದಿಗೆ ಅನುಮತಿ :
ಸರ್ಕಾರ ವೈದ್ಯಕೀಯ ಕಾಲೇಜಿಗೆ ಅಗತ್ಯ ಇರುವ 79 ಹುದ್ದೆಗಳನ್ನು ಸೃಜಿಸಿರುವ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ಸದ್ಯ 17 ವೈದ್ಯಕೀಯ ಬೋಧಕರು, 5 ಕ್ಲರ್ಕ್,20 ಗ್ರೂಪ್ ‘ಡಿ’ ಸಿಬ್ಬಂದಿ ಸೇರಿದಂತೆ, ಅಗತ್ಯ ಪರಿಕರಗಳು ಖರೀದಿಸಲು ಅನುಮತಿ ನೀಡುವಂತೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಯುವರಾಜ್ ಸಭೆಯಲ್ಲಿ ತಿಳಿಸಿದರು.

ಈಗಾಗಲೇ ವಿದ್ಯಾರ್ಥಿಗಳು 2023-24ನೇ ಸಾಲಿಗೆ ಪ್ರವೇಶಾತಿ ಪಡೆದಿರುವುದರಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ತರಗತಿಗಳನ್ನು ಆರಂಭಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮೊದಲನೇ ಸಾಲಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸಲು ಹುಬ್ಬಳ್ಳಿ, ಬಳ್ಳಾರಿ, ಕೊಪ್ಪಳ, ಗದಗ ಮತ್ತು ಶಿವಮೊಗ್ಗ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಂದ ತಾತ್ಕಾಲಿಕವಾಗಿ ಬೋಧಕ ಸಿಬ್ಬಂದಿಗಳನ್ನು ನೇಮಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಇದ್ದು, ವೈದ್ಯಕೀಯ ಕಾಲೇಜಿಗೆ ಬೋಧಕ ಆಸ್ಪತ್ರೆಯಾಗಿ ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಸ್ಪಂದಿಸಿದ ಸಚಿವ ಡಾ.ಶಿವಪ್ರಕಾಶ ಆರ್ ಪಾಟೀಲ್, ಸರ್ಕಾರ ಸೃಜಿಸಿರುವ 79 ಹುದ್ದೆಗಳಿಗೆ ರೋಸ್ಟರ್ ಬಿಂದು ಅಳವಡಿಸಲು ಇಲಾಖೆಗೆ ಪತ್ರ ಬರೆಯಿರಿ. ಪ್ರಥಮ ವರ್ಷದ ತರಗತಿಗಳನ್ನು ಆರಂಭಿಸಲು ಅಗತ್ಯ ಇರುವ ವೈದ್ಯಕೀಯ ಬೋಧಕರನ್ನು ಸರ್ಕಾರ ಶೀಘ್ರವೇ ನೇಮಿಸಲಿದೆ. ಉಳಿದಂತೆ ಸ್ಥಳೀಯವಾಗಿ ಗ್ರೂಪ್ ಡಿ ಹುದ್ದೆಗಳನ್ನು ನೇಮಿಸಿಕೊಳ್ಳಬಹುದು. ಕಾಲೇಜು ಆರಂಭಕ್ಕೆ ಬೇಕಾದ ಪರಿಕರಗಳನ್ನು ಅಲ್ಪಾವಧಿ ಟೆಂಡರ್ ಕರೆದು ಖರೀದಿಸಲು ಸೂಚಿಸಿದರು.

ಹಳೆಯ ಕಟ್ಟಡ ನೆಲಸಮಗೊಳಿಸಲು ಸೂಚನೆ : ಜಿಲ್ಲಾ ಆಸ್ಪತ್ರೆಯು ಆವರಣದಲ್ಲಿ 24 ಹಳೆಯ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ನೆಲಸಮಗೊಳಿಸುವಂತೆ ಸಚಿವರು ಸೂಚನೆ ನೀಡಿದರು. ಈಗ ಆರೋಗ್ಯ ಇಲಾಖೆಯ ಒಡತನದಲ್ಲಿ ಇರುವ ಜಿಲ್ಲಾ ಆಸ್ಪತ್ರೆಯನ್ನು ಜಾಗವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನಕ್ಕೆ ಪಡೆದುಕೊಳ್ಳಲಾಗುವುದು. ಜಿಲ್ಲಾ ಆಸ್ಪತ್ರೆ ಅತ್ಯಗತ್ಯ ಇರುವ ಕಟ್ಟಡಗಳನ್ನು ಹೊರತು ಪಡಿಸಿ ಬೇರೆ ಕಟ್ಟಡಗಳನ್ನು ನೆಲಸಮಗೊಳಿಸಿ, ಮೊದಲಿಗೆ ವೈದ್ಯಕೀಯ ಕಾಲೇಜಿ ಆಡಳಿತಾತ್ಮಕ ವಿಭಾಗದ ಕಾಮಗಾರಿಯನ್ನು ಆರಂಭಿಸುವAತೆ ಸಚಿವ ಡಾ.ಶಿವಪ್ರಕಾಶ ಆರ್ ಪಾಟೀಲ್ ನಿರ್ದೇಶನ ನೀಡಿದರು.

ಎರಡು ವರ್ಷ ಕಡ್ಡಾಯ ಸೇವೆ ನಿಯಮ ರೂಪಿಸಿ: ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಕಡ್ಡಾಯವಾಗಿ ಎರಡು ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸುವ ನಿಯಮ ರೂಪಿಸಬೇಕು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸಲಹೆ ನೀಡಿದರು.

ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಖರ್ಚು ಮಾಡಿ ವೈದ್ಯಕೀಯ ಶಿಕ್ಷಣ ನೀಡುತ್ತಿದೆ. ಆದರೆ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ವೈದ್ಯಕೀಯ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಕೋರ್ಸ್ ಮುಗಿದ ನಂತರ ವಿದೇಶಗಳಿಗೆ ಹೋಗುತ್ತಾರೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ವೈದ್ಯರು ಇರುವುದಿಲ್ಲ. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜ್ಯದಲ್ಲಿ ಕಡ್ಡಾಯವಾಗಿ ಎರಡು ವರ್ಷ ಸೇವೆ ಸಲ್ಲಿಸುವ ನಿಯಮ ರೂಪಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವರು, ರಾಜ್ಯದಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಈಗಾಗಲೇ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಜಿಲ್ಲೆಯ ಎಲ್ಲಾ ಶಾಸಕರ ತೀರ್ಮಾನದಂತೆ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ಮಾಣ ಮಾಡಲಾಗುವುದು. 2023ರ ಸೆಪ್ಟೆಂಬರ್ 15ರಂದು ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 150 ಪ್ರವೇಶಾತಿಗಳೊಂದಿಗೆ ಚಿತ್ರದುರ್ಗ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬಾಲಕರಿಗೆ ಮತ್ತು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಜಿಎನ್‌ಎಂ ಹಾಸ್ಟೆಲ್‌ನಲ್ಲಿ ಬಾಲಕಿಯರಿಗೆ ಹಾಸ್ಟೆಲ್‌ನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮೂಲಸೌಲಭ್ಯದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ತಕ್ಷಣ ಕ್ರಮವಹಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಸಭೆಯ ನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಆರ್.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲೆಯ ಶಾಸಕರು, ಅಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ ಗುಡ್ಡದರಂಗವ್ವನಹಳ್ಳಿ ಸ್ನಾತಕೋತ್ತರ ಜ್ಞಾನಗಂಗೋತ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ  ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *