ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ರೇಣುಕಾಪುರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು, ಹೆಂಚುಗಳು ಹೊಡೆದಿರುವುದರಿಂದ ಮಳೆ ಬಂದರೆ ನೀರು ಒಳಗೆ ನಿಲ್ಲುತ್ತದೆ. ಅದಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ
ಕೆ.ಪಿ.ಭೂತಯ್ಯ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರೇಣುಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ತುಂಬಾ ಹಳೆಯದಾಗಿದ್ದು, 300 ರಿಂದ 400 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆಕಸ್ಮಿಕವಾಗಿ ಕಟ್ಟಡ ಕುಸಿದರೆ ಮಕ್ಕಳ ಪ್ರಾಣಹಾನಿಯಾಗುವ ಸಾಧ್ಯತೆಯಿದೆ. ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಹೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅವಘಡ ಸಂಭವಿಸುವ ಮೊದಲೆ ಎಚ್ಚೆತ್ತುಕೊಂಡು ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡುವಂತೆ ಕೆ.ಪಿ.ಭೂತಯ್ಯ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಇನ್ನು ಹದಿನೈದು ದಿನದೊಳಗೆ ಹಳೆ ಶಾಲೆಯನ್ನು ಕೆಡವಿ ಹೊಸ ಶಾಲೆ ಕಟ್ಟಬೇಕು. ಇಲ್ಲವಾದಲ್ಲಿ ಶಾಲೆಯ ಮುಂಭಾಗದಲ್ಲಿ ರಸ್ತೆ ತಡೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಬರುವತನಕ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಕೆ.ಪಿ.ಭೂತಯ್ಯ ಎಚ್ಚರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಎಂ.ಶಶಿಕಲಾ ಇವರುಗಳು ಈ ಸಂದರ್ಭದಲ್ಲಿದ್ದರು.
















