ಹೊಳಲ್ಕೆರೆ, (ಏ.27) : ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಖ್ಯಾತಿ ಎಚ್.ಆಂಜನೇಯ ಅವರಿಗೆ ಇದೆ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಹೇಳಿದರು.
ತಾಲೂಕಿನ ಬಸಾಪುರ, ರಂಗಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಮತಪ್ರಚಾರ ನಡೆಸಿದ ಸಂದರ್ಭ ಮಾತನಾಡಿ, ಹಿಂದುಳಿದ-ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ಆಡಳಿತದ ಅವಧಿ ಹೊಳಲ್ಕೆರೆ ಅಷ್ಟೇ ಅಲ್ಲ ಚಿತ್ರದುರ್ಗ ಜಿಲ್ಲೆಗೆ ಸುವರ್ಣ ಯುಗವಾಗಿತ್ತು. ಅಂತಹ ದಿನಗಳು ಮರುಕಳಿಸಲು ದಿನಗಣನೆ ಆರಂಭವಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಆಂಜನೇಯ ಎಂದಿಗೂ ದ್ವೇಷದ ರಾಜಕಾರಣ ಮಾಡಲಿಲ್ಲ. ನನಗೆ ಈ ಊರಲ್ಲಿ ಕಡಿಮೆ ಮತ ಬಂದಿವೆ ಎಂದು ಆ ಗ್ರಾಮದ ಜನರನ್ನು ನಿರ್ಲಕ್ಷ್ಯ ಮಾಡಲಿಲ್ಲ. ಜಾತ್ಯತೀತ, ಪಕ್ಷಾತೀತವಾಗಿ ಕ್ಷೇತ್ರದ ಜನರನ್ನು ಗೌರವದಿಂದ ಕಂಡರು ಎಂದು ಹೇಳಿದರು.
ಕೋಟ್ಯಂತರ ರೂಪಾಯಿ ಅನುದಾನ ತಂದು ಕ್ಷೇತ್ರದಲ್ಲಿ ಈ ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯ ಕೈಗೊಂಡರು. ಚಿತ್ರಹಳ್ಳಿ, ಮಲ್ಲಾಡಿಹಳ್ಳಿ, ರಾಮಗಿರಿ ಮಾರ್ಗದಲ್ಲಿ ಶೈಕ್ಷಣಿಕ ಕಟ್ಟಡಗಳು ಆಂಜನೇಯ ಅವರ ಕಾಳಜಿ, ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗಾಗಿ ಬಹಳಷ್ಟು ಮಂದಿ ಹೋರಾಟ ನಡೆಸಿದ ಫಲ ಯೋಜನೆ ಜಾರಿಗೊಂಡಿತು. ಆದರೆ, ಹೊಳಲ್ಕೆರೆ ತಾಲೂಕು ಕೈಬಿಟ್ಟು ಹೋಗಿತ್ತು. ತಕ್ಷಣ ಅಂದಿನ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ತಂದು, ಕ್ಷೇತ್ರವನ್ನು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸೇರಿಸಿದರು. ಜೊತೆಗೆ ಸಾವಿರಾರು ಕೊಳವೆಬಾವಿ ಕೊರೆಯಿಸಿ, ಬರಡುಭೂಮಿಗಳು ತೋಟಗಳಾಗಿ ಮಾರ್ಪಾಡು ಆಗುವ ರೀತಿ ಕಾರ್ಯನಿರ್ವಹಿಸಿದರು ಎಂದು ತಿಳಿಸಿದರು.
ಇಷ್ಟೇಲ್ಲ ಪ್ರಗತಿ ಕೆಲಸ ಮಾಡಿದ ಆಂಜನೇಯ ಕಳೆದ ಬಾರಿ ನಾನು ಇಂತಹ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳುವಲ್ಲಿ ಮತ್ತು ಪ್ರಚಾರ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಫಲ, ಅಹಂಕಾರಿ ವ್ಯಕ್ತಿ ಎಂ.ಚಂದ್ರಪ್ಪ ಗೆಲುವು ಸಾಧಿಸಿದರು. ಆದರೆ, ಈಗ ಜನರೇ ಆಂಜನೇಯ ಅವರು ಮಾಡಿರುವ ಕೆಲಸ ಸ್ಮರಿಸುತ್ತಿದ್ದಾರೆ. ಯಾವುದೇ ಊರಿಗೆ ನಾವು ಹೋಗಲಿ ಆಂಜನೇಯ ಅವರನ್ನು ಗೆಲ್ಲಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಜನರು ಘೋಷಣೆ ಹಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಆಂಜನೇಯ ಅವರನ್ನು ಸ್ವಾಗತಿಸಲು ಜನರು ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿದ್ದಾರೆ ಎಂದರು.
ನಾನು ಆರೇಳು ಚುನಾವಣೆಗಳನ್ನು ನೋಡಿದ್ದೇನೆ. ಆದರೆ, ಈ ಬಾರಿ ಆಂಜನೇಯ ಪರ ಅಲೆ ಇರುವುದನ್ನು ನಾನು ಹಿಂದೆಂದು ಕಂಡಿರಲಿಲ್ಲ. ಕಾಂಗ್ರೆಸ್ ಪಕ್ಷ ಬಡವರ ಉದ್ಧಾರಕ್ಕೆ ಶ್ರಮಿಸುತ್ತದೆ ಎಂಬ ನಂಬಿಕೆ ಜನರಲ್ಲಿದ್ದು, ಈ ಕಾರಣಕ್ಕೆ ಎಲ್ಲೆಡೆ ನೂರಾರು ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಬಲ ತುಂಬಿದವರು ಆಂಜನೇಯ. ಜೊತೆಗೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದರು. ಈ ಬಾರಿ ಅವರನ್ನು ನಾವುಗಳು ಒತ್ತಾಯದಿಂದ ಚುನಾವಣೆ ಕಣಕ್ಕೆ ಇಳಿಸಿದ್ದೇವೆ. ಅವರನ್ನು ಕ್ಷೇತ್ರದ ಇತಿಹಾಸದಲ್ಲಿಯೇ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ, ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಐದು ವರ್ಷ ಮಾಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನೇ ಮೂಲೆಗುಂಪು ಮಾಡಿ, ಸ್ವಹಿತಾಸಕ್ತಿ ರಕ್ಷಿಸಿಕೊಂಡಿದ್ದಾರೆ ಎಂದು ದೂರಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಒಳ್ಳೆಯ ಕೆಲಸ ಮಾಡಿದರೆ ಜನ ಪ್ರೀತಿಯಿಂದ ಕಾಣುತ್ತಾರೆ ಎಂಬುದಕ್ಕೆ ಕ್ಷೇತ್ರದ ಯಾವುದೆ ಊರಿಗೆ ನಾನು ಹೋದರು ಜನರ ಸ್ವಾಗತವೇ ಸಾಕ್ಷಿ ಎಂದು ಭಾವುಕರಾದರು.
ಬಹಳಷ್ಟು ಹಳ್ಳಿಗಳಲ್ಲಿ ನನ್ನ ಪರವಾಗಿ ಸ್ವಂತ ದುಡ್ಡು ವೆಚ್ಚ ಮಾಡಿ ಪ್ರಚಾರವನ್ನು ಎಲ್ಲ ಸಮುದಾಯದವರು ಮಾಡುತ್ತಿದ್ದಾರೆ. ಜನರ ಅಭಿಮಾನಕ್ಕೆ ನಾನು ಋಣಿ ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕೆಪಿಸಿಸಿ ಸಂಯೋಜಕ ಲೋಕೇಶ್‍ನಾಯ್ಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಗೋಡೇಮನೆ ಹನುಮಂತಪ್ಪ, ಕೆ.ಸಿ.ಪುರುಷೋತ್ತಮ್, ವದಿಗೆರೆ ರಾಜಪ್ಪ, ತುಪ್ಪದಹಳ್ಳಿ ಶೇಖರ್, ವೈಶಾಖ್ ಯಾದವ್ ಉಪಸ್ಥಿತರದ್ದರು.