ಸುದ್ದಿಒನ್ ಡೆಸ್ಕ್
ಚಿತ್ರದುರ್ಗ, (ಮೇ.14) : ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಚಳ್ಳಕೆರೆಯ ರಘುಮೂರ್ತಿ ಮಾತ್ರ ಗೆದ್ದಿದ್ದರು. ಉಳಿದ ಐದರಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆಯಿದ್ದು, ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು. ಈ ಸಭೆಯಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆಂಬುದು ನಿರ್ಧಾರವಾಗುತ್ತದೆ.
ಮುಖ್ಯಮಂತ್ರಿ ಆಯ್ಕೆಯ ನಂತರ ಸಚಿವರು ಯಾರಾಗುತ್ತಾರೆಂಬುದು ಬಾರೀ ಕುತೂಹಲ ಮೂಡಿಸಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಗೆದ್ದ ಶಾಸಕರಲ್ಲಿ ಸಚಿವರು ಯಾರಾಗುತ್ತಾರೆಂಬುದೆ ಪ್ರಸ್ತುತ ರಾಜಕೀಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
ಚಿತ್ರದುರ್ಗ ಜಿಲ್ಲೆಯ ಲೆಕ್ಕಾಚಾರ : 34 ವರ್ಷಗಳ ಸುದೀರ್ಘ ಕಾಲದ ನಂತರ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬಂದಿದೆ. ಅದರಂತೆಯೇ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿತ್ರದುರ್ಗ ಜಿಲ್ಲೆ ಕಾರಣಾಂತರಗಳಿಂದ ಬಿಜೆಪಿ ಪಾರುಪತ್ಯ ಮೆರೆದಿತ್ತು. ಕಾಲ ಚಕ್ರ ಉರುಳಿದಂತೆ ಮತ್ತೆ ಕಾಂಗ್ರೆಸ್ ಗೆ ಗತವೈಭವದ ದಿನಗಳು ಮರುಕಳಿಸಿವೆ.
ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಚಳ್ಳಕೆರೆಯಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ ಈ ಬಾರಿಯ ಫಲಿತಾಂಶ ಅದೇ ಬಿಜೆಪಿ ಹೊಳಲ್ಕೆರೆಯಲ್ಲಿ ಮಾತ್ರ ಗೆಲುವು ಸಾಧಿಸಿ, ಎರಡೂ ಪಕ್ಷಗಳ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ. ಈ ಮೂಲಕ ಕಳೆದ ಚುನಾವಣೆಯಲ್ಲಿ ಚಳ್ಳಕೆರೆಯ ಗೆದ್ದ ರಘುಮೂರ್ತಿ ಮತ್ತು ಹೊಳಲ್ಕೆರೆಯ ಚಂದ್ರಪ್ಪ ಮಾತ್ರ ಪುನಾರಾಯ್ಕೆಯಾಗಿರುವುದು ವಿಶೇಷ.
ಮೊಳಕಾಲ್ಮೂರು – ಎನ್.ವೈ.ಗೋಪಾಲಕೃಷ್ಣ
ಜಿಲ್ಲೆಯ ಕಾಂಗ್ರೆಸ್ ನಲ್ಲಿ ಹಿರಿಯರು ಅನುಭವಿ ರಾಜಕಾರಣಿಯಾದ ಇವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಮತ್ತೆ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದಾರೆ. ಪಕ್ಷ ತೊರೆದು ಮತ್ತೆ ಪಕ್ಕಕ್ಕೆ ವಾಪಾಸಾಗಿರುವುದರಿಂದ ಸಚಿವ ಸ್ಥಾನ ದೊರಕುವುದು ಕಷ್ಟ ಸಾಧ್ಯ.
ಚಳ್ಳಕೆರೆ – ಟಿ.ರಘುಮೂರ್ತಿ
ಈ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದೇ ಇದ್ದ ಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಏಕೈಕ ಶಾಸಕರಾದ್ದ ಅವರಿಗೆ ಸಚಿವ ಸ್ಥಾನ ಸ್ವಲ್ಪದರಲ್ಲೇ ತಪ್ಪಿತ್ತು. ಈ ಬಾರಿ ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿರುವ ಕಾರಣ ಸಚಿವ ಸ್ಥಾನ ಯಾರಿಗೆ ಎಂಬುದೇ ತಿಳಿಯುತ್ತಿಲ್ಲ. ಅವರಿಗಿಂತಲೂ ಹಿರಿಯರಾದ ಎನ್.ವೈ. ಗೋಪಾಲ ಕೃಷ್ಣ, ಜಿ.ಜಿ.ಗೋವಿಂದಪ್ಪ, ಸುಧಾಕರ್ ಇರುವುದರಿಂದ ಸಚಿವ ಸ್ಥಾನ ಸಿಗುವುದು ಅನುಮಾನ. ಹ್ಯಾಟ್ರಿಕ್ ಗೆಲುವು ಸಾಧಿಸಿರುವುದರಿಂದ ಪ್ರಭಾವ ಬಳಸಿ ಸಚಿವ ಸ್ಥಾನ ಪಡೆದರೂ ಅಚ್ಚರಿಯಿಲ್ಲ.
ಚಿತ್ರದುರ್ಗ – ಕೆ.ಸಿ.ವೀರೇಂದ್ರ ಪಪ್ಪಿ
ಈ ಬಾರಿ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದ್ದಾರೆ. ಇತಿಹಾಸದಲ್ಲಿಯೇ ಅತಿಹೆಚ್ಚು ಮತ ಪಡೆದ ವಿಜೇತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಸೇರಿ ಟಿಕೆಟ್ ಗಿಟ್ಟಿಸಿಕೊಂಡು ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿ ಆಯ್ಕೆಯಾಗಿರುವುದರಿಂದ ಇವರಿಗೂ ಕೂಡ ಸಚಿವ ಸ್ಥಾನ ಬಹುತೇಕ ಅನುಮಾನ.
ಹಿರಿಯೂರು – ಡಿ. ಸುಧಾಕರ್
ಹಿರಿಯೂರಿನಿಂದ ಸ್ಪರ್ಧಿಸಿ ವಿಜೇತರಾದವರು ಸಚಿವರಾಗುತ್ತಾರೆಂಬುದು ಈ ಕ್ಷೇತ್ರದ ವಿಶೇಷ. ಅದರಂತೆಯೇ ಕೆ.ಹೆಚ್. ರಂಗನಾಥ, ಡಿ. ಮಂಜುನಾಥ ಅವರು ಸಚಿವರಾಗಿದ್ದರು. ನಂತರ ಸುಧಾಕರ್ ಅವರು ಪಕ್ಷೇತರರಾಗಿ ಗೆದ್ದು ಯಡಿಯೂರಪ್ಪ ಅವರ ಸಚಿವಸಂಪುಟದಲ್ಲಿ ಸಚಿವರಾಗಿದ್ದರು. ಒಮ್ಮೆ ಸಚಿವರಾಗಿ ಸೇವೆ ಸಲ್ಲಿಸಿರುವುದರಿಂದ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ದೊರೆಯುವುದು ಕಷ್ಟ ಸಾಧ್ಯ.
ಹೊಸದುರ್ಗ – ಬಿ.ಜಿ.ಗೋವಿಂದಪ್ಪ
ಮೂಲಗಳ ಪ್ರಕಾರ ಜಿಲ್ಲೆಯ ಹಿರಿಯ ಮುತ್ಸದ್ಸಿ ರಾಜಕಾರಣಿ ಬಿ.ಜಿ.ಗೋವಿಂದಪ್ಪ ಅವರು ಈ ಬಾರಿ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಹೆಸರಾದ ಇವರು 2013 ರಲ್ಲಿಯೇ ಸಚಿವರಾಗಬೇಕಿತ್ತು. ಅಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಸಚಿವರಾಗಬೇಕಿತ್ತು. ಆದರೆ ಅಂದು ಹೊಳಲ್ಕೆರೆಯಿಂದ ಗೆದ್ದಿದ್ದ ಹೆಚ್. ಆಂಜನೇಯ ಅವರು ಜಾತಿ ಲೆಕ್ಕಾಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಗೋವಿಂದಪ್ಪನವರಿಗೂ ಸಚಿವರಾಗುವ ಅವಕಾಶಗಳಿದ್ದರೂ, ಕುರುಬ ಜಾತಿಗೆ ಸೇರಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಇವರೂ ಕೂಡ ಅದೇ ಸಮುದಾಯಕ್ಕೆ ಸೇರಿದವರಾಗಿದ್ದ ಕಾರಣ ಮತ್ತು ಅದೇ ಸಮುದಾಯದ ಇತರೇ ಶಾಸಕರು ಸಚಿವರಾಗಿದ್ದರಿಂದ ಅವರಿಗೆ ಸಚಿವರಾಗುವ ಅವಕಾಶ ಕೈತಪ್ಪಿತ್ತು.
ಆದರೆ ಈ ಬಾರಿ ಅವರಿಗೆ ಸಚಿವರಾಗುವ ಅವಕಾಶ ಹೆಚ್ಚಾಗಿದೆ. ಹಿರಿಯ ಮತ್ತು ಅನುಭವಿ ರಾಜಕಾರಣಿ ಎಂಬುದೇ ಅವರಿರುವ ಅರ್ಹತೆ. ಪ್ರಸ್ತುತ ಜಿಲ್ಲೆಯ ಶಾಸಕರುಗಳ ಪೈಕಿ ಇವರಿದೆ. ಕುರುಬ ಸಮುದಾಯದ ಕೋಟಾದಡಿ ಜಿಲ್ಲೆಯ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನುತ್ತಿವೆ ರಾಜಕೀಯ ಮೂಲಗಳು.
ಜಿಲ್ಲೆಯ ರಾಜಕಾರಣದ ಮಟ್ಟಿಗೆ ಬಹುತೇಕ ಸಂದರ್ಭಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಕಾರಣಾಂತರಗಳಿಂದಾಗಿ ಬೇರೆ ಜಿಲ್ಲೆಯ ಸಚಿವರಾಗಿದ್ದರು.ನಮ್ಮ ಜಿಲ್ಲೆಯವರೇ ಉಸ್ತುವಾರಿ ವಹಿಸಿಕೊಂಡಿದ್ದು ತೀರಾ ಕಡಿಮೆ. ಜಾತಿ ಮತ್ತು ರಾಜಕೀಯ ಲೆಕ್ಕಾಚಾರಗಳೇನೇ ಇರಲಿ ಈ ಬಾರಿಯಾದರೂ ನಮ್ಮ ಜಿಲ್ಲೆವರೇ ಯಾರಾದರೊಬ್ಬರು ಸಚಿವರಾಗಿ ಮೆಡಿಕಲ್ ಕಾಲೇಜು, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ ಎನ್ನುವುದು ಸುದ್ದಿಒನ್ ಆಶಯ.