ಬೆಂಗಳೂರು: ಕಾಂಗ್ರೆಸ್‍ನ ಪರಂಪರೆ ಏನು ಎಂಬುದು ಇಂದು ಅನಾವರಣಗೊಂಡಿದೆ. ಭ್ರಷ್ಟಾಚಾರವೇ ಕಾಂಗ್ರೆಸ್‍ನ ಪರಂಪರೆ ಎಂಬುದು ಗೊತ್ತಾಗಿದೆ ಎಂದು ಪಕ್ಷದ ರಾಜ್ಯ ವಕ್ತಾರರು ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಅವರದೇ ಪಕ್ಷದ ಮುಖಂಡರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮುಖವಾಡವನ್ನು ಕಳಚಿ ಅವರನ್ನು ವಿಲನ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇರುವುದೂ ಇದರಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದರು.
ನಿನ್ನೆ ಡಿಕೆಶಿ ಕುಡುಕ, ಭ್ರಷ್ಟಾಚಾರಿ ಆಗಿದ್ದರು. ಇವತ್ತು ಉಗ್ರಪ್ಪನವರಿಗೆ ಅವರು ಕುಡುಕರೆಂದು ಅನಿಸುತ್ತಿಲ್ಲ; ಹಾಗೆಯೇ ಅವರಲ್ಲಿ ಭ್ರಷ್ಟಾಚಾರವೂ ಕಾಣುತ್ತಿಲ್ಲ. ಅವರು ನಿನ್ನೆ 8 ಶೇಕಡಾದಿಂದ 16 ಶೇಕಡಾಕ್ಕೆ ಏರಿದ್ದರು. ಇವತ್ತು ಅವರು ಪಕ್ಕಾ ರೈತ ಮತ್ತು ಅವರ ಆಸ್ತಿಯೆಲ್ಲವೂ ವ್ಯಾಪಾರದ ದುಡಿಮೆ, ಪರಿಶ್ರಮದಿಂದ ಬಂದುದೇ ಆಗಿದೆ ಎಂಬ ಮಾತು ಉಗ್ರಪ್ಪನವರಿಂದ ಬಂದಿದೆ ಎಂದು ತಿಳಿಸಿದರು,
ಲುಲು ಮಾಲ್‍ನ ಹಣ ಎಲ್ಲಿಂದ ಬಂತೆಂದು ಡಿಕೆಶಿ ಹೇಳಬೇಕು. ವಕೀಲ ಉಗ್ರಪ್ಪ ಅವರೀಗ ನಗೆಪಾಟಲಿಗೆ ಸಿಲುಕಿದ್ದು, ಅಪ್ಪಟ ಸುಳ್ಳುಗಾರ ಎಂಬುದು ಸಾಬೀತಾಗಿದೆ.
ನಿನ್ನೆ ಉಗುಳಿದ್ದೆಲ್ಲವನ್ನೂ ಅವರು ವಾಪಸ್ ಪಡೆದಿದ್ದಾರೆ. ಉಗ್ರಪ್ಪ ಅವರು ಸಿದ್ದರಾಮಯ್ಯ ಅವರ ಮೌತ್‍ಪೀಸ್ ಆಗಿದ್ದಾರೆ. ಈ ನಾಟಕದ ಸೂತ್ರಧಾರಿ ಸಿದ್ದರಾಮಯ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೇಳುವುದೆಲ್ಲವೂ ಸುಳ್ಳು ಹಾಗೂ ಪಿಸುಮಾತಿನಲ್ಲಿ ಹೇಳುವುದೆಲ್ಲವೂ ಸತ್ಯ ಎಂಬುದು ಉಗ್ರಪ್ಪರಿಂದ ಗೊತ್ತಾಗಿದೆ. ಕಾಂಗ್ರೆಸ್‍ನವರು ವೇದಿಕೆಯಲ್ಲಿ ಸತ್ಯ ಹೇಳುವುದಿಲ್ಲ. ಆ ಪಕ್ಷವೊಂದು ಭ್ರಷ್ಟಾಚಾರದ ಕೂಪ ಎಂಬುದು ಜನರಿಗೆ ಗೊತ್ತಾಗಿದೆ ಎಂದು ತಿಳಿಸಿದರು.
ಉಗ್ರಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು ಡಿಕೆಶಿಗೆ ಶಕ್ತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಪಕ್ಷದ ಕಾರ್ಯಾಲಯದಲ್ಲೇ ಆಗಿರುವ ಈ ತಪ್ಪಿನ ಬಗ್ಗೆ ತಿಳಿದಿದ್ದರೂ ಡಿಕೆಶಿ ಅದಕ್ಕೆ ಸಮಜಾಯಿಷಿ ಕೊಟ್ಟಿಲ್ಲ. ಅಧ್ಯಕ್ಷ ಸ್ಥಾನದ ಅಶಕ್ತ ವ್ಯಕ್ತಿ ಎಂಬುದು ಸಾಬೀತಾಗಿರುವ ಕಾರಣ ಡಿಕೆಶಿ ಪಕ್ಷಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಈ ವಿಚಾರದ ಬಗ್ಗೆ ಡಿಕೆಶಿ ದೂರು ಕೊಡಲಿ. ತನಿಖೆಯೂ ಆಗಲಿ ಎಂದರು.