ಮುಂದಿನ ಚುನಾವಣೆಯ ರೂಪು ರೇಷೆಯ ಬಗ್ಗೆ ಮಾತನಾಡುವುದಕ್ಕೆ ಇಂದು ಎಐಸಿಸಿ ಅಧ್ಯಕ್ಷ ರಾಜ್ಯದ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಅತ್ತ ಕಡೆಗೆ ನಾಯಕರು ಪಯಣ ಬೆಳೆಸುತ್ತಿದ್ದಂತೆ ಇತ್ತ ಕಡೆ ಸಂಭಾವ್ಯ ಪಟ್ಟಿ ರಿಲೀಸ್ ಆಗಿದ್ದು, ಸಿದ್ದರಾಮಯ್ಯ ಆಪ್ತರಿಗೆ ಶಾಕ್ ಆಗಿದೆ. ಇಂದು ಹೈಕಮಾಂಡ್ ಜೊತೆಗೆ ಮಾತನಾಡಿ, ಕಾಂಗ್ರೆಸ್ ಸಂಭಾವ್ಯ ಪಟ್ಟಿಯನ್ನು ಅಧಿಕೃತವಾಗಿ ರಿಲೀಸ್ ಮಾಡುವ ಮುನ್ನವೇ ಪತ್ರಿಕೆಯಲ್ಲಿ ಸಂಭಾವ್ಯ ಪಟ್ಟಿ ರಿಲೀಸ್ ಆಗಿದೆ.
ಬಹುತೇಕ ಹಿರಿಯ ನಾಯಕರು ಹೆಸರು ಅದರಲ್ಲಿ ಇಲ್ಲದಾಗಿದೆ. ಹೀಗಾಗಿ ಎಲ್ಲರಿಗೂ ಇದು ಅನುಮಾನ ಮೂಡಿದಂತಾಗಿದೆ. ಸಂಭಾವ್ಯ ಪಟ್ಟಿಯಲ್ಲಿ ಎಲ್ಲಾ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ. ಇನ್ನು ಈ ಸಂಭಾವ್ಯ ಪಟ್ಟಿಯಲ್ಲಿ ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರದೆ ಇರುವ ಶಿವಲಿಂಗೇಗೌಡ ಅವರ ಹೆಸರನ್ನು ಸೂಚಿಸಿಲಾಗಿದೆ. ಜೆಡಿಎಸ್ ಪಕ್ಷದಿಂದ ಶಾಸಕರಾಗಿರುವ ಶಿವಲಿಂಗೇಗೌಡ ಅವರು, ಕಾಂಗ್ರೆಸ್ ಗೆ ಬರುತ್ತಾರೆ ಎಂಬ ಮಾತಿದೆ. ಬರುವುದಕ್ಕೂ ಮುನ್ನವೇ ಸಂಭಾವ್ಯ ಪಟ್ಟಿಯಲ್ಲಿ ಹೆಸರು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಹಾಗೂ ಲೋಕೋಪಯೋಗಿ ಮಾಜಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರ ಹೆಸರನ್ನು ಕೈ ಬಿಡಲಾಗಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಇನ್ನು ಮೂಲಗಳ ಪ್ರಕಾರ ಧ್ರುವ ನಾರಾಯಣ್ ಅವರಿಗೆ ಚಾಮರಾಜನಗರದಲ್ಲಿ ನಿಲ್ಲುವಂತೆ ಸಿದ್ದರಾಮಯ್ಯ ಅವರೇ ಸೂಚನೆ ನೀಡಿದ್ದಾರೆ. ಆದರೆ ಸಂಭಾವ್ಯ ಪಟ್ಟಿಯಲ್ಲಿ ಅವರ ಹೆಸರು ಕೂಡ ಮಿಸ್ ಆಗಿದೆ.
ಇಂದು ರಾಜ್ಯದ ನಾಯಕರು ದೆಹಲಿಗೆ ಮೀಟಿಂಗ್ ಹೋಗಿದ್ದಾರೆ. ಮೀಟಿಂಗ್ ಬಳಿಕ ಸಂಭಾವ್ಯ ಪಟ್ಟಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಆ ಪಟ್ಟಿ ಬಂದ ಮೇಲೆ ಈಗ ರಿಲೀಸ್ ಆಗಿರುವ ಪಟ್ಟಿಯ ಸತ್ಯಾಸತ್ಯತೆ ಹೊರ ಬರಲಿದೆ.