ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಎಲ್ಲಾ ಪಕ್ಷಗಳು ಕಾಯುತ್ತಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ನಮ್ಮದೇ ಜಯಭೇರಿ ಬಾರಿಸಬೇಕೆಂಬ ಹಠವು ಎಲ್ಲಾ ಪಕ್ಷಗಳಲ್ಲೂ ಇದ್ದಂತಿದೆ. ಇದೀಗ ಕಾಂಗ್ರೆಸ್ ಕೂಡ ಬಿಬಿಎಂಪಿ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಿದೆ.
ಈ ಸಂಬಂಧ ಕಾಂಗ್ರೆಸ್ ಭವನ ರೇಸ್ ಕೋರ್ಸ್ ನಲ್ಲಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ
ಕೆಪಿಸಿಸಿ.ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಶಾಸಕ ಎನ್.ಎ.ಹ್ಯಾರೀಸ್ ಮತ್ತು ನಗರ ಅಧ್ಯಕ್ಷ ಶೇಖರ್, ಜಿ.ಕೃಷ್ಣಪ್ಪರವರು ಭಾಗವಹಿಸಿದ್ದರು. ಜೊತೆಗೆ ಮಹಾನಗರ ಪಾಲಿಕೆ ಸದಸ್ಯರುಗಳು ಹಾಜರಿದ್ದರು.
ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗಳಿಗೆ ಭೇಟಿ ನೀಡಬೇಕು. ದೇಶಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟ ಕೊಡುಗೆಗಳ ಬಗ್ಗೆ ಅರಿವು ಮೂಡಿಸಬೇಕು ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು. ಕಾಂಗ್ರೆಸ್ ಪಕ್ಷ ಸದಸ್ಯತ್ವ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಬೇಕು.
ಇದೇ ತಿಂಗಳು 18ನೇ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಪಟ್ಟಿ ಪರಿಶೀಲನೆ ಮಾಡಬೇಕು ವಿಳಾಸ ಬದಲಾವಣೆಯಾದವರು ಮತ್ತು ಮರಣ ಹೊಂದಿದವರು ಹಾಗೂ ಮತದಾರರ ಪಟ್ಟಿಯಲ್ಲಿ ಬೋಗಸ್ ಮತದಾರರು ಸೇರ್ಪಡೆಯಾಗಿದ್ದಾರೆ ಅದನ್ನ ಪತ್ತೆ ಹಚ್ಚಿ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಬೇಕು. ಡಿಲೀಟ್ ಮಾಡದೇ ಹೋದರೆ ಹೋರಾಟ ಮಾಡೋಣ ಎಂದು ಹೇಳಿದರು.