ಸುದ್ದಿಒನ್ ವೆಬ್ ಡೆಸ್ಕ್
ನವದೆಹಲಿ : ಅಕ್ಟೋಬರ್ 17 ರ ಸೋಮವಾರ ನಡೆದ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಮತ ಎಣಿಕೆಯು ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಕ್ಟೋಬರ್ 19 ರ ಬುಧವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ.
ತೀವ್ರ ಕುತೂಹಲ ಮೂಡಿಸಿರುವ ಈ ಚುನಾವಣೆಯಲ್ಲಿ
ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಹಿರಿಯರ ನೆಚ್ಚಿನ ಆಯ್ಕೆ ಎಂದು ಪರಿಗಣಿಸಿದರೆ, ಶಶಿ ತರೂರ್ ಅವರನ್ನು ಪಕ್ಷದ ಪರಿವರ್ತನೆಯ ಅಭ್ಯರ್ಥಿ ಎಂದು ಬಿಂಬಿಸಿದ್ದಾರೆ.
ವರದಿಗಳ ಪ್ರಕಾರ, ನಾಳೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ, ದೇಶಾದ್ಯಂತ ಸ್ಥಾಪಿಸಲಾದ 68 ಮತಗಟ್ಟೆಗಳಿಂದ ಮತಪೆಟ್ಟಿಗೆಗಳನ್ನು ಮಂಗಳವಾರ ರಾಷ್ಟ್ರ ರಾಜಧಾನಿಗೆ ತರಲಾಗಿದೆ. ಅವುಗಳನ್ನು ಪಕ್ಷದ ಪ್ರಧಾನ ಕಚೇರಿಯ ‘ಸ್ಟ್ರಾಂಗ್ ರೂಂ’ನಲ್ಲಿ ಇರಿಸಲಾಗಿದೆ. ಅಭ್ಯರ್ಥಿಗಳಾದ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಏಜೆಂಟರ ಮುಂದೆ ಮತಪೆಟ್ಟಿಗೆಗಳನ್ನು ತೆರೆಯಲಾಗುವುದು ಎಂದು ವರದಿಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ‘ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ’ ರೀತಿಯಲ್ಲಿ ನಡೆಸಲಾಗಿದೆ. ಒಟ್ಟು 9,915 ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳಲ್ಲಿ 9,500 ಕ್ಕೂ ಹೆಚ್ಚು ಜನರು ಪಿಸಿಸಿ ಕಚೇರಿಗಳು ಮತ್ತು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಊಹಾಪೋಹಗಳ ನಡುವೆ, ಪಕ್ಷವನ್ನು ನಡೆಸುವಲ್ಲಿ ಗಾಂಧಿ ಕುಟುಂಬದ ಸಲಹೆಯನ್ನು ಪಡೆಯಲು ನನಗೆ ಯಾವುದೇ ಅಭ್ಯಂತರ ಇಲ್ಲ ಎಂದು ಖರ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಶಶಿ ತರೂರ್ ಅವರು ಕೆಲವು ಕಾಂಗ್ರೆಸ್ ಹಿರಿಯರನ್ನು “ನೇತಗಿರಿ ಎಂದು ಲೇವಡಿ ಮಾಡಿದ್ದಾರೆ.