ಚಿತ್ರದುರ್ಗ, (ಫೆ.28): ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಈಗ ಹಿಜಾಬ್ ಕೇಸರಿ ನಡುವೆ ಜಗಳ ಹಚ್ಚಿ ಅಲ್ಪಸಂಖ್ಯಾತರ ಮತ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುಡುಗಿದರು.
ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿ ಹದಿನೈದು ದಿನ ನಡೆಯಬೇಕಿದ್ದ ಕಲಾಪ ರದ್ದತಿಗೆ ಕಾರಣರಾದ ಕಾಂಗ್ರೆಸ್‍ನ ಜನವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾಪಾರ್ಟಿಯಿಂದ ಸೋಮವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಗರೀಭಿ ಹಠಾವೋ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಜನರನ್ನು ವಂಚಿಸಿಕೊಂಡು ಬರುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರು, ಕೊರೋನಾ ಹೀಗೆ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವ ಬದಲು ಕಾಂಗ್ರೆಸ್ ವಿನಾ ಕಾರಣ ಧರಣಿ ನಡೆಸಿ ವಿಧಾನಸಭೆ ಕಲಾಪವನ್ನು ಮೊಟುಕುಗೊಳಿಸಿತು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದೆ. ಇದನ್ನು ಸಹಿಸದ ಕಾಂಗ್ರೆಸ್‍ನವರು ಈಗ ಮೇಕೆದಾಟು ಮುಂದಿಟ್ಟುಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ಏನು ಮಾಡದ ಕಾಂಗ್ರೆಸ್‍ಗೆ ಈಗ ಬಿಜೆಪಿ ಯನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.
ಪ್ರತಿ ವರ್ಷವೂ ನೀರಾವರಿ ಯೋಜನೆಗೆ ಹಣ ಮೀಸಲಿಡುವುದಾಗಿ ಹೇಳಿ ನಂಬಿಕೆ ದ್ರೋಹವೆಸಗಿರುವ ಕಾಂಗ್ರೆಸ್ ಏನು ಅಭಿವೃದ್ದಿ ಮಾಡಿಲ್ಲ. ಅದೇ ಏಳು ವರ್ಷದೊಳಗೆ ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರುವಾಗುವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೊರೋನಾ ಒಂದು, ಎರಡು ಮತ್ತು ಮೂರನೆ ಅಲೆಯಲ್ಲಿ ದೇಶವನ್ನು ರಕ್ಷಿಸಿರುವುದರಿಂದ ಸಾವು-ನೋವಿನ ಸಂಖ್ಯೆ ಕಡಿಮೆಯಾಗಿದೆ. ಮುಂದುವರೆದ ದೇಶಗಳು ಕೊರೋನಾದಿಂದ ತತ್ತರಿಸಿ ಹೋಗಿವೆ.
ಲಾಕ್‍ಡೌನ್ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಅನೇಕ ನೆರವು ನೀಡಲಾಗಿದೆ. ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಕಾರ್ಮಿಕರು ಹೀಗೆ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿದ್ದರಿಂದ ಕೊರೋನಾ ನಿಯಂತ್ರಿಸಲು ಸಾಧ್ಯವಾಯಿತು ಎಂದು ವಿರೋಧಿಗಳ ಆಪಾದನೆಗಳಿಗೆ ಉತ್ತರಿಸಿದರು.
ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯನ್ನು ಕಾಂಗ್ರೆಸ್ ಖಂಡಿಸಬೇಕಿತ್ತು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದವರ ಮೇಲೆ ಗುಂಡು ಹಾರಿಸಿದಾಗ, ನರಗುಂದ, ನವಲಗುಂದ ರೈತರ ಮೇಲೆ ಗುಂಡು ಹೊಡೆದಾಗ ಕಾಂಗ್ರೆಸ್‍ನವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದೆ.
ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದ ಕೇಂದ್ರ ಬಿಜೆಪಿ. ಸರ್ಕಾರ 24 ಸಾವಿರ ಕೋಟಿ ರೂ.ಗಳಲ್ಲಿ ಹದಿನಾರು ಸಾವಿರ ಕೋಟಿ ರೂ.ಗಳನ್ನು ನೀಡಲಿದೆ. ಚಿತ್ರದುರ್ಗಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ರದ್ದುಪಡಿಸಿದ ಕೀರ್ತಿ ಕಾಂಗ್ರೆಸ್‍ಗೆ ಸೇರಬೇಕು.
ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ಕಲ್ಲಿದ್ದಲ್ಲು, ಕಾಮನ್‍ವೆಲ್ತ್ ಕ್ರೀಡೆ, 2ಜಿ.ಸ್ಪೆಕ್ಟ್ರಂ ನಲ್ಲಿಯೂ ಹಣ ಲೂಟಿ ಹೊಡೆದಿರುವ ಕಾಂಗ್ರೆಸ್ ಜನವಿರೋಧಿ ನೀತಿಯನ್ನು ಜನ ಅರ್ಥಮಾಡಿಕೊಳ್ಳಬೇಕೆಂದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡುವ ಬದಲು ಕಾಂಗ್ರೆಸ್ ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದೆ. ಮೇಕೆದಾಟು ಪಾದಯಾತ್ರೆಯನ್ನು ಜಾತ್ರೆಯನ್ನಾಗಿ ಮಾಡಿಕೊಂಡಿದೆ. ಭದ್ರಾಮೇಲ್ದಂಡೆ ಯೋಜನೆ ಬಗ್ಗೆ ಕಾಂಗ್ರೆಸ್‍ಗೆ ಕಾಳಜಿಯಿಲ್ಲ. ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಕಾಂಗ್ರೆಸ್ ಅವರ ಮನೆ ಬಾಗಿಲಿಗೆ ಹೋಗಿ ಸಾಂತ್ವನ ಹೇಳಲಿಲ್ಲ. ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ಕಾಲಹರಣ ಮಾಡುತ್ತಿದೆ. ತ್ರಿವರ್ಣ ಧ್ವಜದ ಮೇಲೆ ಕಾಂಗ್ರೆಸ್‍ಗೆ ಗೌರವವಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿತು. ಇವೆಲ್ಲಾ ವಿಚಾರಗಳನ್ನು ಗ್ರಾಮೀಣ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಜನರನ್ನು ಬಿಜೆಪಿ.ಯತ್ತ ಸೆಳೆಯುವುದಾಗಿ ಹೇಳಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಮಾಜಿ ಅಧ್ಯಕ್ಷ ಟಿ.ಬದರಿನಾಥ್, ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಖಜಾಂಚಿ ಗಿರೀಶ್ ಮಾಧುರಿ, ಯುವ ಮೋರ್ಚ ಜಿಲ್ಲಾಧ್ಯಕ್ಷ ಹನುಮಂತೆಗೌಡ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಬಿಜೆಪಿ.ನಗರಾಧ್ಯಕ್ಷ ನವೀನ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ವೆಂಕಟೇಶ್‍ಯಾದವ್, ಕಲ್ಲೇಶಯ್ಯ, ಚಂದ್ರಿಕಾ ಲೋಕನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಅನುರಾದ ರವಿಕುಮಾರ್, ಸದಸ್ಯರುಗಳಾದ ತಾರಕೇಶ್ವರಿ, ವೆಂಕಟೇಶ್, ಬಿಜೆಪಿ.ಜಿಲ್ಲಾ ಮಹಿಳಾ ಅಧ್ಯಕ್ಷೆ ಶೈಲಜಾರೆಡ್ಡಿ, ಬಸಮ್ಮ, ಭಾರ್ಗವಿ ದ್ರಾವಿಡ್, ಅನುರಾದ ಭಾಸ್ಕರ್, ಹರೀಶ್, ವೆಂಕಟೇಶ್, ಕಿರಣ, ವಿರೂಪಾಕ್ಷ ಯಾದವ್, ಬಾಂಡ್ ರವಿ, ಶಂಭು, ವಿವಿಧ ಮೋರ್ಚಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.