2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು : ಮಾಜಿ ಸಚಿವ ಹೆಚ್.ಆಂಜನೇಯ

2 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್,ಚಿತ್ರದುರ್ಗ : ರಾಹುಲ್‍ಗಾಂಧಿ ಯವರ ಭಾರತ್ ಜೋಡೋ ಯಾತ್ರೆ ವಿಶ್ವದಲ್ಲಿಯೇ ಇತಿಹಾಸ ಸೃಷ್ಠಿಸಿದೆ. ಒಡೆದು ಹೋಗಿರುವ ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಯಾತ್ರೆಯಿಂದ ಬಿಜೆಪಿಗೆ ನಡುಕ ಉಂಟಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ನಗರದಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆಯ ಪ್ರಥಮ ವಾರ್ಷಿಕೋತ್ಸವ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿ ದೇಶದ ಮೂರ್ನಾಲ್ಕು ಉದ್ಯಮಿಗಳನ್ನು ಶ್ರೀಮಂತರನ್ನಾಗಿಸಿದ್ದಾರೆ. 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಂಡು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ರಾಹುಲ್‍ಗಾಂಧಿರವರ ಭಾರತ್ ಜೋಡೋ ಯಾತ್ರೆಯನ್ನು ನೋಡಿದಾಗ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ನಮ್ಮ ಹಿರಿಯರು ನಡೆಸಿದಂತ ಹೋರಾಟ ನೆನಪಾಗುತ್ತದೆ. ಯಾತ್ರೆಯಲ್ಲಿ ಲಕ್ಷಾಂತರ ಜನ ಬೆಂಬಲಿಸಿದರು. ನಾನು ಕೂಡ ಸ್ವಲ್ಪ ದೂರ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯನಾಗುವುದೆ ಒಂದು ಪುಣ್ಯ. ಭಾರತ್ ಜೋಡೋ ಯಾತ್ರೆ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕಿದೆ.

ಕಾಂಗ್ರೆಸ್ ಉದ್ಗಾಟನೆ ಮಾಡಿರುವ ಬಹಳಷ್ಟು ಕಾರ್ಯಕ್ರಮಗಳು ಭಾರತ್ ಹೆಸರಿನಲ್ಲಿದೆ. ಈಗಿನ ಪ್ರಧಾನಿ ಮೋದಿ ಇಂಡಿಯಾವನ್ನು ಭಾರತ್ ಎಂದು ಬದಲಿಸಲು ಹೊರಟಿದ್ದಾರೆ. ಅದಕ್ಕೆ ಯಾರೂ ವಿರೋಧ ಮಾಡಿಲ್ಲ ಎಂದು ಹೇಳಿದರು.

ಅಡುಗೆ ಅನಿಲ ಬೆಲೆಯನ್ನು ಕೇಂದ್ರ ಸರ್ಕಾರ ಇನ್ನೂರು ರೂ.ಕಡಿಮೆಗೊಳಿಸಿರುವುದು ಚುನಾವಣಾ ಗಿಮಿಕ್. ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಎಲ್ಲಾ ಕಡೆ ಪಸರಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡುತ್ತ ಕಳೆದ ವರ್ಷ ಸೆ.7 ರಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್‍ಗಾಂಧಿ ಕೈಗೊಂಡ ಭಾರತ್ ಜೋಡೋ ಯಾತ್ರೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಲು ನೆರವಾಯಿತು. ಇದರಿಂದ ಬಿಜೆಪಿ. ವೈಫಲ್ಯವನ್ನು ಜನರಿಗೆ ತಿಳಿಸಿದಂತಾಯಿತು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್‍ಕುಮಾರ್, ಉಪಾಧ್ಯಕ್ಷರುಗಳಾದ ಜಿ.ಎಸ್.ಕುಮಾರ್‍ಗೌಡ, ಡಿ.ಟಿ.ವೆಂಕಟೇಶ್, ನಜ್ಮತಾಜ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಕೆ.ಪಿ.ಸಿ.ಸಿ. ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಮೆಹಬೂಬ್ ಖಾತೂನ್, ಸೇವಾದಳದ ಇಂದಿರಾ, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಹನೀಫ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ಲಾ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾರತ್ ಜೋಡೋ ಯಾತ್ರೆ ಪ್ರಥಮ ವಾರ್ಷಿಕೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್.ಬಿ.ಎಂ.ಸರ್ಕಲ್, ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಮದಕರಿ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಕಾಂಗ್ರೆಸ್ ಕಚೇರಿಗೆ ತಲುಪಿತು.

Share This Article
Leave a Comment

Leave a Reply

Your email address will not be published. Required fields are marked *