ಬೆಂಗಳೂರು: ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಹಠಾತ್ ನಿಧನಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಕಾಂಗ್ರೆಸ್ ನಾಯಕರು ಕತ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತುಂಬಾ ದುಃಖಿತನಾಗಿದ್ದೇನೆ ಎಂದಿದ್ದಾರೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ಅರಣ್ಯ, ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವರಾದ ಶ್ರೀ ಉಮೇಶ ಕತ್ತಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ಈ ಸಮಯದಲ್ಲಿ ಮೃತರ ಆತ್ಮಕ್ಕೆ ಭಗವಂತ ಶಾಂತಿಯನ್ನು ದಯಪಾಲಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದು, ಹಿರಿಯ ರಾಜಕಾರಣಿ, ರಾಜ್ಯದ ಅರಣ್ಯ ಸಚಿವರು ಹಾಗೂ ಆತ್ಮೀಯರಾಗಿದ್ದ ಶ್ರೀ ಉಮೇಶ್ ಕತ್ತಿ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

