ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪೊಳ್ಳು ಭರವಸೆಗಳನ್ನು ನೀಡುತ್ತಿದೆ :  ಬಿ.ವೈ.ವಿಜಯೇಂದ್ರ

suddionenews
5 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.25) : ಸಮರ್ಥ ನಾಯಕತ್ವವುಳ್ಳ ಪ್ರಧಾನಿ ಮೋದಿ ಸರ್ಕಾರ ದೇಶ ಆಳುತ್ತಿರುವುದಕ್ಕೆ ನಾವುಗಳೆಲ್ಲಾ ಹೆಮ್ಮೆ ಪಡಬೇಕು ಎಂದು ಅರಣ್ಯ ನಿಗಮದ ಅಧ್ಯಕ್ಷೆ ನಟಿ ತಾರ  ಸಂತಸ ವ್ಯಕ್ತಪಡಿಸಿದರು.

ಹೊರವಲಯ ಚಂದ್ರವಳ್ಳಿ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ನರೇಂದ್ರಮೋದಿ ಎರಡನೆ ಅವಧಿಗೆ ದೇಶದ ಪ್ರಧಾನಿಯಾಗಿ ವಿಶ್ವದ ಬಲಿಷ್ಟ ದೇಶಗಳಲ್ಲಿ ಭಾರತವನ್ನು ಮೂರನೆ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಚಿನ್ನದ ಬೆಲೆ ಜಾಸ್ತಿಯಾಗಿದೆ ಎಂದು ಕಾಂಗ್ರೆಸ್‍ನವರು ಬೊಬ್ಬೆ ಹೊಡೆಯುತ್ತಿದ್ದಾರೆ.

ಚೀನ, ಬಾಂಗ್ಲದೇಶ, ಶ್ರೀಲಂಕಾ ಇನ್ನು ಅನೇಕ ನೆರೆಯ ರಾಷ್ಟ್ರಗಳು ಅದೋಗತಿಗೆ ಹೋಗಿವೆ ಎನ್ನುವ ಅರಿವು ಅವರಿಗೇಕಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ತಾರ ಭಾರತದಲ್ಲಿರುವ ಪ್ರತಿಯೊಬ್ಬರ ಜೀವನವನ್ನು ಗಟ್ಟಿಗೊಳಿಸಿ ನೆಮ್ಮದಿ ನೆಲೆಸುವಂತೆ ಮಾಡಿದ್ದಾರೆಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸವಾಲುಗಳನ್ನು ಎದುರಿಸಿ ಎಲ್ಲವನ್ನು ಮೆಟ್ಟಿ ನಿಂತರು. ಅಂತಃಕರಣವಿರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಕೇಂದ್ರ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜನರಿಗೆ ಕೊಟ್ಟಿವೆ. ಕೇವಲ ನಮ್ಮ ದೇಶವಷ್ಠೆ ಅಲ್ಲ ಬೇರೆ ಬೇರೆ ರಾಷ್ಟ್ರಗಳಲ್ಲಿ ಸಂಕಷ್ಠದಲ್ಲಿರುವ ಹೆಣ್ಣು ಮಕ್ಕಳಿಗೂ ಮೋದಿ ನೆರವಿನ ಹಸ್ತ ಚಾಚಿದ್ದಾರೆ. ಹಣೆಬೊಟ್ಟು, ಬಳೆ ನಮ್ಮ ಸಂಸ್ಕøತಿ. ಇಡಿ ಪ್ರಪಂಚ ಭಾರತದ ಕಡೆ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ನಮ್ಮ ಪ್ರಧಾನಿ ಮೋದಿರವರ ಪಾರದರ್ಶಕ ಆಡಳಿತ ಕಾರಣ ಎಂದು ಶ್ಲಾಘಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಕೆಚ್ಚೆದೆ, ಸ್ವಾಭಿಮಾನದ ಸಂಕೇತವಾಗಿರುವ ಚಿತ್ರದುರ್ಗ ಬಿಜೆಪಿ. ಭದ್ರ ಕೋಟೆ. ಮಹಿಳೆ ಅಭಿವೃದ್ದಿಯಾದರೆ ದೇಶ ಅಭಿವೃದ್ದಿಯಾದಂತೆ ಎನ್ನುವ ಕನಸು ಮೋದಿಯವರದು. ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾನಾ ಪೊಳ್ಳು ಭರವಸೆಗಳನ್ನು ನೀಡುವ ಕೆಲಸ ಮಾಡುತ್ತಿದೆ. ನಿರುದ್ಯೋಗಿ ಯುವಕರಿಗೆ ಕೆಲಸವಿಲ್ಲ. ತಾಯಂದಿರಿಗೆ ಶಕ್ತಿ ತುಂಬಲಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳು ಹಾಗೂ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗೆ ಮುಟ್ಟಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರಬೇಕಾಗಿರುವುದರಿಂದ ಹಗಲು ರಾತ್ರಿ ಪಕ್ಷದ ಕೆಲಸ ಮಾಡಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ಎಲ್ಲಾ ರಂಗಗಳಲ್ಲಿಯೂ ಪುರುಷನಿಗೆ ಮಹಿಳೆ ಸಮಾನವಾಗಿ ದುಡಿಯುತ್ತಿದ್ದಾಳೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಗ್ಗಳಿಕೆ ಪ್ರಧಾನಿಗೆ ಸಲ್ಲಬೇಕು.

ಎಂಟು, ಒಂಬತ್ತು, ಹತ್ತನೆ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ಎರಡು ಸಾವಿರ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಅನೇಕ ನೆರವು ಒದಗಿಸಿದೆ.

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳಿಗೆ ಸೈಕಲ್ ನೀಡಿದರು. ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಬಿಜೆಪಿ.ಗೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಮಹಿಳೆಯರಲ್ಲಿ ವಿನಂತಿಸಿದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡುತ್ತ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರ ಅಭಿವೃದ್ದಿಗೆ ವಿಶೇಷ ಗಮನ ಕೊಟ್ಟರು. ಎರಡು ವರ್ಷಗಳ ಕಾಲ ಇಡಿ ಜಗತ್ತನ್ನು ಕೊರೋನಾ ಕಾಡಿದ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿರವರು ಯಾರು ಉಪವಾಸವಿರಬಾರದೆಂದು ಉಚಿತವಾಗಿ ಅಕ್ಕಿ ನೀಡಿದರು. ಮುಂದುವರೆದ ದೇಶಗಳು ಇನ್ನು ಕೊರೋನಾದಿಂದ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಅದೇ ನಮ್ಮ ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಿದ್ದರ ಫಲವಾಗಿ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡುತ್ತ ಒಂದೊಂದು ಹೊಳಲ್ಕೆರೆಯಲ್ಲಿ ಮಹಿಳಾ ಸಂಘಗಳಿಗೆ ಎರಡು ಲಕ್ಷ ರೂ.ಗಳನ್ನು ನೀಡಲಾಗಿದೆ. ಮುಂದಿನ ಏಪ್ರಿಲ್‍ನಿಂದ ಒಂದೊಂದು ಸಂಘಕ್ಕೆ ಐದು ಲಕ್ಷ ರೂ.ಗಳನ್ನು ಕೊಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿಯೇ ವಿಶೇಷ ಯೋಜನೆಗಳನ್ನು ನೀಡಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ.ಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದರು.

ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಮಾತನಾಡಿ ಒಂದು ಕಾಲದಲ್ಲಿ ಹೆಣ್ಣು ಅಡುಗೆ ಮನೆಗೆ ಮಾತ್ರ ಮೀಸಲು ಎನ್ನುವಂತಿತ್ತು. ಈಗ ಕಾಲ ಬದಲಾಗಿದೆ. ಆಟೋರಿಕ್ಷಾ ಓಡಿಸುವುದರಿಂದ ಹಿಡಿದು ಚಂದ್ರಲೋಕಕ್ಕೂ ಹೋಗುವಷ್ಠು ಮಹಿಳೆ ಸಮರ್ಥಳಾಗಿದ್ಧಾಳೆ. ನಿರ್ಮಲ ಸೀತಾರಾಮನ್, ಶೃತಿ ಇರಾನಿ, ಶೋಭ ಕರಂದ್ಲಾಜೆ, ಶಶಿಕಲ ಜೊಲ್ಲೆ ಇವರುಗಳೆಲ್ಲಾ ರಾಜಕೀಯದಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಒಟ್ಟಾರೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಬಡಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿನ ಮುಂದಿನ ಭವಿಷ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಘೋಷಿಸಿದರು. ಬಿಸಿಯೂಟ ತಯಾರಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಒಂದು ಸಾವಿರ ರೂ.ಗಳನ್ನು ಮುಖ್ಯಮಂತ್ರಿ ಬಸವರಾಜ್‍ಬೊಮ್ಮಾಯಿ ಹೆಚ್ಚಿಗೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್, ಮಹಿಳೆಯರಲ್ಲಿರುವ ಕೌಶಲ್ಯಗಳಿಗೆ ಉತ್ತೇಜನ ನೀಡುವುದಕ್ಕಾಗಿ ಒಂದು ಲಕ್ಷ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡುತ್ತ ಬಿಜೆಪಿ. ಮಹಿಳೆಯರ ಪರ ಚಿಂತಿಸುವ ಪಕ್ಷ. 94 ಸಾವಿರ ಕೋಟಿ ರೂ.ಗಳನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿರಿಸಲಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅರಾಜಕತೆಯನ್ನು ಸೃಷ್ಠಿಸಿತು. ಬಿಜೆಪಿ. ಗೋಹತ್ಯೆ, ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದೆ. ಮಹಿಳೆಯರ ರಕ್ಷಣೆ ವಿಚಾರವನ್ನು ಕಾಂಗ್ರೆಸ್ ಹಗುರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಮಹಿಳೆಯರಿಗೆ ಹೇಳಿದರು.

ಬಿಜೆಪಿ. ರಾಷ್ಟ್ರೀಯ ಕಾರ್ಯದರ್ಶಿ ವಿಜಯ ರಾಹತ್ಕರ್ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಡಬ್ಬಲ್ ಇಂಜಿನ್ ಬಿಜೆಪಿ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಎಲ್ಲಾ ಕ್ಷೇತ್ರಗಳ ವಿಕಾಸವಾಗುತ್ತಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಭಾರತ್ ತೋಡೋ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಶ್ರಮಶಕ್ತಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ಐದು ಸಾವಿರ ರೂ.ಗಳನ್ನು ನೀಡುತ್ತಿದೆ. ಮಧ್ಯಾಹ್ನದ ಬಿಸಿಯೂಟ, ವಿದ್ಯಾವಾಹಿನಿ ಅಪೌಷ್ಠಿಕತೆ ನಿವಾರಣೆಗಾಗಿ ಐರನ್ ಮಾತ್ರೆಗಳನ್ನು ಮಕ್ಕಳಿಗೆ ನೀಡುತ್ತಿದೆ. ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ನೀಡಿರುವ ಬಿಜೆಪಿ.ಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಮಹಿಳೆಯರಲ್ಲಿ ಕೋರಿದರು.
ಬಿಜೆಪಿ. ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತ ವಿವೇಕಾನಂದ ಮಾತನಾಡುತ್ತ ರೈತರು, ನೇಕಾರರು ವಿವಿಧ ರಂಗಗಳಲ್ಲಿ ದುಡಿಯುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿದ್ಯಾಸಿರಿ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಿಸಿದ್ದು, ಹನ್ನೊಂದು ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ಸ್ವಚ್ಚ ಭಾರತ್ ಕಾರ್ಯಕ್ರಮ, ಸುಕನ್ಯಾ ಯೋಜನೆ ಒಳಗೊಂಡಂತೆ ಮಹಿಳೆಯರ ಪರವಿರುವ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾರೆಡ್ಡಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ, ಕಾರ್ಯದರ್ಶಿ ವತ್ಸಲ, ಕಾರ್ಯಾಲಯ ಕಾರ್ಯದರ್ಶಿ ರಜಿನಿ ಪೈ, ಉಪಾಧ್ಯಕ್ಷೆ ಶರಣಮ್ಮ ಕಾಮರೆಡ್ಡಿ, ಸಾಮಾಜಿಕ ಜಾಲತಾಣದ ಪ್ರತಿಮ ಸುಭಾಷ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಮೀಳ ನಲ್ಲೂರು, ಲಿಂಗಮೂರ್ತಿ, ಜಿ.ಟಿ.ಸುರೇಶ್ ಸಿದ್ದಾಪುರ, ಜೈಪಾಲ್, ರಾಜೇಶ್‍ಬುರುಡೆಕಟ್ಟೆ, ಶ್ಯಾಮಲ ಶಿವಪ್ರಕಾಶ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ಜಿ.ಓ.ಮುರಾರ್ಜಿ ಮತ್ತು ತಂಡದವರು ಪ್ರಾರ್ಥಿಸಿದರು. ಶೈಲಜರೆಡ್ಡಿ ಸ್ವಾಗತಿಸಿದರು. ಎ.ರೇಖ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *