ಬೆಳಗಾವಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಜನರ ಮನಸ್ಸು ಗೆಲ್ಲುವುದಕ್ಕೆ ಈಗಾಗಲೇ ಪ್ರಚಾರದ ಅಲೆ ಆರಂಭವಾಗಿದೆ. ಇದರ ನಡುವೆ ಕಾಂಗ್ರೆಸ್ ಆಕರ್ಷಿಸುವಂತ ಪ್ರಣಾಳಿಕೆಯನ್ನು ನೀಡುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಾ ಇದೆ. ಈ ಹಿನ್ನೆಲೆ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು ಮಾಸಾಶನ ಕೊಡುವ ಬಗ್ಗೆ ಘೋಷಣೆ ಮಾಡಿದೆ.
ಇಂದು ಬೆಳಗಾವಿಯಲ್ಲಿ ಯುವಕ್ರಾಂತಿ ಆಚರಿಸಿದ್ದಾರೆ. ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸೇರಿದಂತೆ ರಾಜ್ಯ ಘಟಾನುಘಟಿ ಕಾಂಗ್ರೆಸ್ ನಾಯಕರೇ ಈ ಸಭೆಯಲ್ಲಿ ಸೇರಿದ್ದರು. ಈ ವೇಳೆ ಪಕ್ಷದ ನಾಲ್ಕನೇ ಗ್ಯಾರಂಟಿಯನ್ನು ರಿಲೀಸ್ ಮಾಡಿದ್ದಾರೆ.
ಯುವಕರನ್ನು ಟಾರ್ಗೇಟ್ ಮಾಡಿಕೊಂಡಿರುವ ಕಾಂಗ್ರೆಸ್, ಯುವನಿಧಿ ಯೋಜನೆಯನ್ನು ಜರಿಗೆ ತಂದಿದೆ. ಈ ಯೋಜನೆಯಡಿ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು. ಸುಮಾರು ಎರಡು ವರ್ಷ ಮೂರು ಸಾವಿರ ಹಣ ನೀಡುವುದಾಗಿ ಗ್ಯಾರಂಟಿ ನೀಡಿದೆ. ಇನ್ನು ಡಿಪ್ಲೋಮಾ ಪದವೀಧರರಿಗೆ 1,500 ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕ ಬಂದರೆ, ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ಮನೆಯ ಯಜಮಾಣಿಗೆ ಪ್ರತಿ ತಿಂಗಳು 2 ಸಾವಿರ, ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ಉಚಿತ ನೀಡುವ ಘೋಷಣೆ ಮಾಡಿದೆ. ಈಗ ನಿರುದ್ಯೋಗಿಗಳಿಗೆ ಮಾಸಾಶನ ಕೂಡ ಘೋಷಣೆ ಮಾಡಿದೆ.