ಹೊಳಲ್ಕೆರೆ,(ಮೇ.01) : ಕಾಂಗ್ರೆಸ್ ಪಕ್ಷವು ಬಡವರು, ಶ್ರಮಿಕರು, ರೈತರು ಸ್ವಾಭಿಮಾನದಿಂದ ಜೀವಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಹೇಳಿದರು.
ಭರಮಸಾಗರ ಹೋಬಳಿ ಡಿ.ಮದಕರಿಪುರ, ದೊಡ್ಡಿಗನಾಳ್, ಹಳವುದರ ಸೇರಿದಂತೆ ವಿವಿಧ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಮತಪ್ರಚಾರದಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಬಡವರು, ಶ್ರಮಿಕರು, ರೈತರ ಹಿತ ಕಾಯಲು ಮತ್ತು ದುಡಿಯುವ ಕೈಗಳಿಗೆ ಕೆಲಸ ನೀಡಲು ಉದ್ಯೋಗ ಖಾತ್ರಿ ಕಾರ್ಯಕ್ರಮ ಅನುಷ್ಟಾನಗೊಳಿಸಿತು. ಇದರಿಂದ ವಲಸೆಗೆ ಸಂಪೂರ್ಣ ಕಡಿವಾಣ ಹಾಕಿದಂತಾಯಿತು. ಜೊತೆಗೆ ಜಮೀನುಗಳ ಅಚ್ಚುಕಟ್ಟು, ಬದು ನಿರ್ಮಾಣ ಮಾಡಿಕೊಂಡು ಕೃಷಿ ಚಟುವಟಿಕೆಗೆ ಶಕ್ತಿ ಬಂತು ಎಂದರು.
ಎಲ್ಲ ವರ್ಗದ ಬಡವರ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿಯೂ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಹೈಟೆಕ್ ಶಾಲೆಗಳಲ್ಲಿಯೂ ಸಹ ಆರ್.ಟಿ.ಇ ಮೂಲಕ ವಿದ್ಯಾಭ್ಯಾಸ ಪಡೆಯಲು ಅನುಕೂಲ ಮಾಡಿಕೊಟ್ಟಿತು. ಅದರಂತೆಯೇ ನಾನು ಸಚಿವನಾಗಿದ್ದ ವೇಳೆ ಹೊಳಲ್ಕೆರೆ ಸೇರಿದಂತೆ ಇಡೀ ರಾಜ್ಯದ ಪ್ರತಿ ಹೋಬಳಿ ಕೇಂದ್ರಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ ಅಕ್ಷರಕ್ರಾಂತಿಗೆ ನಾಂದಿ ಹಾಡಲಾಯಿತು ಎಂದರು.
ಆದರೆ, ಈಗಿನ ಬಿಜೆಪಿ ಸರ್ಕಾರ ಆರ್.ಟಿ.ಇ ಯೋಜನೆ ಹಿಂಪಡೆದು, ಬಡಮಕ್ಕಳ ಶಿಕ್ಷಣ ಹಕ್ಕನ್ನು ಕಿತ್ತುಕೊಂಡಿದೆ. ಕೃಷಿ, ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದು ಸರ್ವಾಧಿಕಾರರಿ ರೀತಿ ವರ್ತಿಸಿದೆ. ಜನವಿರೋಧಿ ಕಾಯ್ದೆ ವಿರುದ್ಧ ಹೋರಾಟ ನಡೆಸಿದ ರೈತರಿಗೆ ದೇಶದ್ರೋಹಿ ಪಟ್ಟ ಕಟ್ಟಲು ಯತ್ನಿಸಿತು ಎಂದು ದೂರಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದರೂ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗದ್ದಾರೆ. ಮಿತಿಮೀರಿದೆ ಭ್ರಷ್ಟಾಚಾರದಿಂದ ಕೊಟ್ಟ ಆಶ್ವಾಸನೆ, ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ನಿರುದ್ಯೋಗಿಗಳಿಗೆ ಉದ್ಯೋಗ, ಕೆರೆಗಳಿಗೆ ನೀರು ತುಂಬಿಸಿ, ಗಂಗಾ ಕಲ್ಯಾಣ ಕಾರ್ಯಕ್ರಮದ ಮೂಲಕ ಕೊಳವೆಬಾವಿಗಳನ್ನು ಕೊರೆಯಿಸಿ ರೈತರಿಗೆ ಆಸರೆಯಾದೆ. ಹೀಗಾಗಿ ನಾನು ಮಾಡಿದ ಅಭಿವೃದ್ಧಿಪರ ಕೆಲಸಗಳು ಜನರ ಮನಸ್ಸಿನಲ್ಲಿ ನೆಲೆಸಿವೆ. ಈ ಬಾರಿ ಚುನಾವಣೆಯಲ್ಲಿ ಮತದಾರರ ಆಶೀರ್ವಾದಿಂದ ಗೆಲುವು ಸಾಧಿಸಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ವಿದೇಶದಲ್ಲಿನ ಕಪ್ಪು ಹಣವನ್ನು ತಂದು ಎಲ್ಲಾ ಜನರ ಬ್ಯಾಂಕ್ ಖಾತೆಗೆ ರು.15 ಲಕ್ಷ ಹಣ ಜಮೆಮಾಡುತ್ತೇವೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ, ಬಡತನ ಹೋಗಲಾಡಿಸುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ, ಅಧಿಕಾರಕ್ಕೆ ಬಂದು 9 ವರ್ಷ ಕಳೆದರೂ ಅವರು ಕೊಟ್ಟ ಯಾವ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಬೆಲೆ ಏರಿಕೆಯಿಂದ ರೈತರ, ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಇನ್ನು ಕೇಲವೇ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನರ ಬದುಕಿಗೆ ಆಸರೆಯಾಗಲಿದೆ ಎಂದರು.
ರಾಜ್ಯ ಸರ್ಕಾರದ ದುರಾಡಳಿತ ಪರಿಣಾಮ ರಾಜ್ಯದ ಅಭಿವೃದ್ಧಿ ಮಣ್ಣು ಪಾಲಾಗಿದೆ. ಪ್ರತಿ ಹಂತದಲ್ಲಿ ಸರ್ಕಾರ ಕಮಿಷನ್ ಪಡೆಯುತ್ತಿದೆ. ಕೇಂದ್ರದಲ್ಲಿ ಕೂಡ ಬಿಜೆಪಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲಾಗದೇ ಜನ ಸಾಮಾನ್ಯರಿಗೆ ಹೊರೆ ಆಗಿದೆ. ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಉದ್ದಗಲಕ್ಕೂ ಬಿಜೆಪಿ ವಿರೋಧಿ ಅಲೆ ಇದ್ದು ಕಾಂಗ್ರೆಸ್ ಪರವಾದ ಅಲೆ ಇದೆ. ಕೇಂದ್ರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, ಸಚಿವರಾಗಿದ್ದ ಸಂದರ್ಭ ಆಂಜನೇಯ ಅವರು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರು. ಆದರೆ, ಪ್ರಚಾರ ಪಡೆಯಲು ಹಿಂಜರಿಕೆ ಪಟ್ಟರು. ಆದರೆ, ಶಾಸಕ ಚಂದ್ರಪ್ಪ, ಕಾಂಗ್ರೆಸ್ ಅವಧಿ ಕಾಮಗಾರಿಗಳನ್ನು ನನ್ಬದು ಎಂದು ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದರು.
ಭರಮಸಾಗರ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, ಆಂಜನೇಯ ಅಭಿವೃದ್ಧಿ ಹರಿಕಾರರು. ಎಲ್ಲ ವರ್ಗದ ಜನರ ಪ್ರೀತಿ ಗಳಿಸಿರುವ ನಾಯಕ. ಇವರ ಗೆಲುವು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯರಾದ ಟಿ.ಎಂ.ಪಿ.ತಿಪ್ಪೇಸ್ವಾಮಿ, ಕೆ.ಟಿ.ಸಿ.ಮಂಜುನಾಥ್, ಸಿರಿಗೆರೆ ಗ್ರಾಪಂ ಅಧ್ಯಕ್ಷ ದೇವರಾಜ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಕೆಪಿಸಿಸಿ ಕೋ-ಆರ್ಡಿನೇಟರ್ ಲೋಕೇಶ್ ನಾಯ್ಕ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿದೇರ್ಶಕ ಅನಿಲ್, ಹೊಳಲ್ಕೆರೆ ಪುರಸಭಾ ಸದಸ್ಯ ವಿಜಯಸಿಂಹ ಖಾಟ್ರೋತ್, ತಾಪಂ ಮಾಜಿ ಸದಸ್ಯ ಗಂಗಣ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಮುಖಂಡರಾದ ಮೀಠ್ಯನಾಯ್ಕ್, ವಿಷ್ಣು, ಶೇಖರಪ್ಪ ಉಪಸ್ಥಿತರಿದ್ದರು.