ನವದೆಹಲಿ: ಸಂಸತ್ತಿನಲ್ಲಿ ಇಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವಕ್ಕೆ ಅಪಾಯವೆಂದರೆ ಈ ರಾಜವಂಶ ಪಕ್ಷಗಳೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜವಂಶವನ್ನು ಮೀರಿ ಎಂದಿಗೂ ಯೋಚಿಸುವುದಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಸಮಸ್ಯೆ. ಕಾಂಗ್ರೆಸ್ ಇಲ್ಲದಿದ್ದರೆ ಏನು ಎಂದು ಜನ ಆಶ್ಚರ್ಯ ಪಡುತ್ತಾರೆ. ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂದು ಸಿಲುಕಿಸಿದ್ದಾರೆ. ಮಹಾತ್ಮ ಗಾಂಧಿ ಅವರೇ ಕಾಂಗ್ರೆಸ್ ಕಿತ್ತೊಗೆಯಬೇಕು ಎಂದು ಬಯಸಿದ್ದರು.
ಗಾಂಧೀಜಿಯವರ ಆಶಯಗಳನ್ನ ಅನುಸರಿಸಿದರೆ ಇಷ್ಟೊತ್ತಿಗೆ ಭಾರತವೂ ಸ್ವಜನಪಕ್ಷಪಾತದಿಂದ ಮುಕ್ತವಾಗುತ್ತಿತ್ತು. ಹೀಗಾಗಿ ಗಾಂಧೀಜಿಯವರ ಆಶದಂತೆ ನಡೆದಿದ್ದರೆ ಕಾಂಗ್ರೆಸ್ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಭಾರತವೂ ಸ್ವದೇಶಿ ಮಾರ್ಗ ಹಿಡಿಯುತ್ತಿತ್ತು. ತುರ್ತು ಪರಿಸ್ಥಿತಿಯ ಕಳಂಕ ಇರುತ್ತಿರಲಿಲ್ಲ. ಸಿಖ್ಖರನ್ನು ಕೊಲೆ ಮಾಡುತ್ತಿರಲಿಲ್ಲ. ದಶಕಗಳಿಂದ ಭ್ರಷ್ಟಾಚಾರ ಜೀವಂತವಾಗಿರುತ್ತಿರಲಿಲ್ಲ. ಜಾತ್ಯಾತೀತತೆ ಅಥವಾ ಪ್ರಾದೇಶಿಕತೆ ಇರುತ್ತಿರಲಿಲ್ಲ. ಸಾಮಾನ್ಯ ಜನರು ಮೂಲ ಸೌಕರ್ಯಕ್ಕಾಗಿ ಇಷ್ಟು ದಿನ ಕಾಯಬೇಕಾಗಿರಲಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.