ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಭೇಟಿ | ಬಿ. ಫಾರಂಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭ

2 Min Read

ಸುದ್ದಿಒನ್, ಚಿತ್ರದುರ್ಗ, ಮಾ.29: ದೇವರು ಮತ್ತು ಜನರ ಮೇಲೆ ನಂಬಿಕೆ ಹೊಂದಿದ ವ್ಯಕ್ತಿ ಎಂದೂ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಬಿ ಫಾರಂ ದೇವರ ಸನ್ನೀಧಿಯಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ. ಬಳಿಕ ಯಾದವ, ಲಂಬಾಣಿ, ಕಬೀರಾನಂದಾ ಮಠ ಸೇರಿದಂತೆ ವಿವಿಧ ಮಠ ಹಾಗೂ ಧರ್ಮಗುರುಗಳನ್ನು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಇದೆ ವೇಳೆ ಮಾತನಾಡಿದ ಚಂದ್ರಪ್ಪ ಅವರು, ಯಾವುದೇ ಕೆಲಸ ಆರಂಭಿಸುವ ಮುನ್ನ ದೇವರು, ಧರ್ಮ ಗುರುಗಳು, ಹಿರಿಯರ ಆಶೀರ್ವಾದ ಪಡೆದು ಮುನ್ನಡೆಯುವುದು ನಮ್ಮ ಸಂಸ್ಕೃತಿ. ಆದ್ದರಿಂದ ಮಾಡಿದಷ್ಟು ನೀಡು ಭೀಕ್ಷೆ ಎಂಬ ಕಾಯಕ ತತ್ವ ಸಾರಿದ ಶ್ರೀಗುರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಬಿ ಫಾರಂ ಗೆ ಪೂಜೆ ಸಲ್ಲಿಸಿ, ಬಳಿಕ ಗುರುಗಳು-ಹಿರಿಯರ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇನೆ. ನೂರಾರು ಜಾತಿ, ಹತ್ತಾರು ಧರ್ಮ, ವಿವಿಧ ಆಚರಣೆ, ಅನೇಕ ಭಾಷೆಗಳಲ್ಲಿ ಏಕತೆ ಹೊಂದಿರುವ ಭಾರತೀಯರ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿ ಶ್ರೀಮಂತವಾಗಿದೆ. ಜೊತೆಗೆ ಇಲ್ಲಿನ ಜನರ ಸೌಹಾರ್ದ ಬದುಕು ಮಾದರಿ ಆಗಿದೆ. ಸ್ವಾಮಿ ವಿವೇಕಾನಂದ, ಬುದ್ಧ, ಬಸವ, ಕನಕ, ವಾಲ್ಮೀಕಿ, ಶ್ರೀಕೃಷ್ಣ, ಗಾಂಧೀಜಿ, ಅಂಬೇಡ್ಕರ್ ಸೇರಿ ಅನೇಕ ಮಹನೀಯರು, ಸಂತರು, ದಾರ್ಶನಿಕರ ಚಿಂತನೆಗಳು ನಾಡಿನ ಸೌಹಾರ್ದತೆಗೆ ಬುನಾದಿ ಆಗಿವೆ ಎಂದು ತಿಳಿಸಿದರು.

ಆದರೆ ಈಚೆಗೆ ಕೆಲವರು ರಾಜಕೀಯ ಕಾರಣಕ್ಕಾಗಿ ಈ ಸೌಹಾರ್ಧತೆ ಹಾಗೂ ಶಾಂತಿಯ ನಾಡಿನಲ್ಲಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ನಾಗರಿಕರ ಮೇಲೆ ಇದೆ. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಈ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಾಳಿ, ಚುನಾವಣೆಯನ್ನು ಸಮರ, ಯುದ್ಧ ಎಂಬ ಮಾತುಗಳು ಸರಿಯಲ್ಲ. ನಾವೆಲ್ಲರೂ ಸಹೋದರರು. ಚುನಾವಣೆ ಸಂದರ್ಭದಲ್ಲಿ ಗೆಲುವಿಗಾಗಿ ಸ್ಪರ್ಧೆ ಅನಿವಾರ್ಯ. ಅದು ದ್ವೇಷಕ್ಕೆ ತಿರುಗಬಾರದು. ಜೊತೆಗೆ ಸಜ್ಜನಿಕೆ, ಎಲ್ಲ ಜನರ ಪ್ರೀತಿ ಗಳಿಸುವ ಗುಣ ರಾಜಕಾರಣಿಗಳಲ್ಲಿ ಹೆಚ್ಚಬೇಕು. ಸುಳ್ಳು, ಜಾತಿ, ಧರ್ಮಗಳನ್ನು ಮುಂದಿಟ್ಟು ಜನರ ಮನಸ್ಸು ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಎಸ್ ಟಿ ಸೆಲ್ ಜಿಲ್ಲಾಧ್ಯಕ್ಷ ಜಯಣ್ಣನವರು, ಕಾಂಗ್ರೆಸ್ ಮುಖಂಡರುಗಳಾದ ಪ್ರಭುಸ್ವಾಮಿ, ಯೂಸುಫ್, ಜಗದೀಶ್, ಮಲ್ಲೇಶ್, ನಾಗರಾಜ್, ಮಲ್ಲೇಶ್, ಬಂಡೆ ಓಬಣ್ಣ, ರಾಜು, ಮಂಜಕ್ಕ,ಹನುಮಂತಪ್ಪ, ಶಿವಾರೆಡ್ಡಿ,ವಿಶ್ವನಾಥ್ ರೆಡ್ಡಿ, ಗೌರಸಮುದ್ರ ಓಬಣ್ಣ, ಮುದಿಯಪ್ಪ, ಬಸಣ್ಣ,ಕಾಟಯ್ಯ, ಶ್ರೀಕಾಂತ್ ಹಾಗೂ ಇನ್ನಿತರರು ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *