ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಫೆ. 27 : ರಾಜ್ಯ ಸರ್ಕಾರ ತನ್ನ ಎಡವಟ್ಟುಗಳನ್ನು ಮತ್ತು ದಿವಾಳಿಯಾದ ಖಜಾನೆಯನ್ನು ಮುಚ್ಚಿಕೊಳ್ಳಲು ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ ವಿದ್ಯಾರ್ಥಿ, ಯುವಜನರ ಕನಸು, ನಿರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ. ಇದರ ಬಗ್ಗೆ ಸರ್ವ ಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಲಿ ಎಂದು ಸಂಸದರಾದ ಗೋವಿಂದ ಕಾರಜೋಳ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಪ್ಪಣಿಗಳು ನಿನ್ನೆಯ ಮಂತ್ರಿಮಂಡಲದ ಸಭೆಯಲ್ಲಿ ಕರ್ನಾಟಕ ಸರ್ಕಾರ 56422 ಹುದ್ದೆಗಳ ಭರ್ತಿಗೆ, ಮುಂದಿನ 30 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಪ್ರಕಟಿಸಿದೆ. ಆದರೆ ಈ ಪ್ರಕ್ರಿಯೆಯನ್ನು ಶೇ.56 ರ ಮೀಸಲಾತಿ ಮತ್ತು ಒಳ ಮೀಸಲಾತಿ ಎರಡನ್ನೂ ಹೊರಗಿಟ್ಟು ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಘೋರ ನ್ಯಾಯವಾಗಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಸಿದ್ಧರಾಮಯ್ಯನವರ ಸರ್ಕಾರ ಪೌರಕಾರ್ಮಿಕರು ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ಪರದಾಡುತ್ತಿದೆ. ಸಾರಿಗೆ ಆರೋಗ್ಯ ಇಲಾಖೆಯ ನೌಕಾರರಿಗೆ ಪಾವತಿಸಬೇಕಾದ ನೂರಾರು ಕೋಟಿ ರೂಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ದೂರಿದರು.
2022 ರಿಂದ ಕರ್ನಾಟಕದಲ್ಲಿ ಎಸ್.ಸಿ. 17 ಮತ್ತು ಎಸ್.ಟಿ. 7% ಮೀಸಲಾತಿ ಜಾರಿಯಲ್ಲಿದೆ, ಸತತ ಮೂರು ವರ್ಷ ಸಿಇಟಿ, ನೀಟ್ ಪರೀಕ್ಷೆಗಳೂ ಸೇರಿದಂತೆ ಸಾವಿರಾರು ನೇಮಕಾತಿಗಳು ಶೇ56 ರ ಮೀಸಲಾತಿ ಪ್ರಮಾಣದಲ್ಲಿ ಸುಗಮವಾಗಿ ನೆಡೆದಿದೆ. ಅಕ್ಟೋಬರ್ 2025ರಲ್ಲಿ ರಾಜ್ಯ ಹೈಕೋರ್ಟ್ ಮೀಸಲಾತಿಗೆ ಮಧ್ಯಂತರ ಆದೇಶದಲ್ಲಿ ಭಾಗಶಃ ತಡೆ ನೀಡಿರುವುದು ನಿಜ, ಆದರೆ ಸರ್ಕಾರ ಹೈಕೋರ್ಟಿನಲ್ಲಿ ಬಲವಾಗಿ ತನ್ನ ನಿರ್ಧಾರವನ್ನು ಸಮರ್ಥಿಸುವ ದಾಖಲೆಗಳನ್ನು ಸಲ್ಲಿಸುವ ಮುತುವರ್ಜಿಯನ್ನು ವಹಿಸಲಿಲ್ಲ ಜಾರ್ಖಂಡ, ಛತ್ತಿಸಗಢದಲ್ಲಿ ಎಸ್.ಸಿ. ಎಸ್.ಟಿ. ಮೀಸಲಾತಿ ಹೆಚ್ಚಳದಿಂದ 50% ದಾಟಿದ್ದರೂ ಮೀಸಲಾಗಿ ಊರ್ಜಿತವಾಗಿದೆ ಎಂದು ಸಂಸದರು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಕೊಡಬೇಕಾದ ಮೀಸಲಾತಿಗೆ ಸಾಂವಿಧಾನಿಕವಾದ ಮಾನ್ಯತೆ ಇದೆ. ಇದನ್ನು ಸಮರ್ಥವಾಗಿ ಹೈಕೋರ್ಟಿನಲ್ಲಿ ಮಂಡಿಸುವಲ್ಲಿ ಸೋತಿರುವ ರಾಜ್ಯಸರ್ಕಾರ ಒಳ ಮೀಸಲಾತಿಯಿಂದ ಹಿಂದೆ ಸರಿದು ನೇಮಕ ಪ್ರಕ್ರಿಯೆ ಆರಂಭಿಸಲು ಹೊರಟಿರುವುದು ಸಾಮಾಜಿಕ ನ್ಯಾಯದ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆಯ ಕೊರತೆ ಇರುವುದನ್ನು ಸ್ಪಷ್ಟಪಡಿಸಿದೆ. ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸರಿಯಾದ ಸ್ಪಷ್ಟನೆ ಕೊಡಲಿಲ್ಲ. ಈಗ ರಾಜ್ಯಪಾಲರು ಸಹಿ ಹಾಕಿದ ಮಸೂದೆಯ ಆಶಯಕ್ಕೂ ಸಚಿವ ಸಂಪುಟದ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಆಗಿದೆ. ಸರ್ಕಾರ ತನ್ನ ಅಹಂಕಾರ ಪ್ರದರ್ಶಿಸು ವುದನ್ನು ನಿಲ್ಲಿಸಲಿ, ಸರ್ಕಾರ ತನ್ನ ಎಡವಟ್ಟುಗಳನ್ನು ಮತ್ತು ದಿವಾಳಿಯಾದ ಖಜಾನೆಯನ್ನು ಮುಚ್ಚಿಕೊಳ್ಳಲು ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ ವಿದ್ಯಾರ್ಥಿ, ಯುವಜನರ ಕನಸು, ನಿರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ ಇದರ ಬಗ್ಗೆ ಸರ್ಕಾರ ಸರ್ವಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಲಿ ಎಂದು ಸರ್ಕಾರವನ್ನು ಸಂಸದರು ಆಗ್ರಹಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷರಾದ ಎ.ಮುರಳಿ, ಮಧುಗಿರಿ ಮಾಜಿ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಮೋಹನ್‍ಕುಮಾರ್, ವೆಂಕಟೇಶ್ ಯಾದವ್, ಉಪಾಧ್ಯಕ್ಷ ರಾದ ಸಿದ್ದಾರ್ಥ ಗುಡಾರ್ಪಿ, ವಕ್ತಾರ ನಾಗರಾಜ್ ಬೇದ್ರೇ, ನಗರಾಧ್ಯಕ್ಷ ಲೋಕೇಶ್ ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.



