ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಅಹಿಂದ, ಹಿಂದುಳಿದ ವರ್ಗಗಳ ನಾಯಕ ಅಂದ್ರೆ ಅದು ಸಿದ್ದರಾಮಯ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈಗ ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು ಅತಿ ಹಿಂದುಳಿದ ವರ್ಗಗಳ ಸಮಾವೇಶ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು. ಇದಕ್ಕೆ ಪೂರಕವೆಂಬಂತೆ ಇಂದು ಸದಾಶಿವನಗರದ ನಿವಾಸದಲ್ಲಿ ಭೇಟಿಯೂ ನಡೆದಿದೆ.
ಅತಿ ಹಿಂದುಳಿದ ವರ್ಗಗಳ 11 ಸ್ವಾಮೀಜಿಗಳ ಒಕ್ಕೂಟ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ನಾಡಿದೆ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ತಂಡ ಡಿಕೆಶು ಅವರನ್ನು ಭೇಟಿ ಮಾಡಿದ್ದು, ನೀವೂ ಮುಂದೆ ಸಿಎಂ ಆಗಲೇಬೇಕೆಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಅತಿ ಹಿಂದುಳಿದವರ ಸಮಾವೇಶ ಮಾಡುವುದಕ್ಕೆ ಒತ್ತಾಯಿಸಿದ್ದಾರೆ.
ಪ್ರಣವಾನಂದ ಸ್ವಾಮೀಜಿ, ರಾಜ್ಯದ ಮುಖ್ಯಮಂತ್ರಿ ಆಗಲು ಡಿಕೆಶಿ ಯೋಗ್ಯ ವ್ಯಕ್ತಿ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ತಡಮಾಡಬಾರದು. ನಮ್ಮೆಲ್ಲರ ಸಂಪೂರ್ಣ ಬೆಂಬಲ ಅವರಿಗಿದೆ. ಡಿಕೆಶಿ ಸಿಎಂ ಆಗಬೇಕೆಂಬ ಬೇಡಿಕೆ ಇದ್ದು, ಅವರಿಗೆ ಯೋಗ್ಯತೆ ಮತ್ತು ಹಕ್ಕು ಎರಡೂ ಇದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರೋದೇ ಎರಡು ಮೂರು ರಾಜ್ಯಗಳಲ್ಲಿ. ಹೀಗಾಗಿ ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳಬೇಕು. ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಯಾವ ಮುಖ್ಯಮಂತ್ರಿಗಳೂ ನಮ್ಮ ಪರ ಕೆಲಸ ಮಾಡಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇವೆ. ಡಿಕೆ ಶಿವಕುಮಾರ್ ಕಷ್ಟ, ನೋವು ಪಟ್ಟಿದ್ದಾರೆ. ಪಕ್ಷಕ್ಕಾಗಿ ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.







