ಚಿತ್ರದುರ್ಗ(ಜ.11): ಜಿಲ್ಲೆಯಲ್ಲಿ ಗುರುತಿಸಿರುವ ಅಪಘಾತ ಸ್ಥಳ ಹಾಗೂ ವಲಯಗಳ ಕುರಿತು, ಅಲ್ಲಿ ಸಂಭವಿಸುವ ಅಪಘಾತಗಳಿಗೆ ಕಾರಣ ಏನು ಎಂದು ಚರ್ಚಿಸಿ, ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಭೆಗಳನ್ನು ನಡೆಸಬೇಕು. ಸಭೆಗಳಲ್ಲಿ ಸಾರ್ವಜನಿಕರು ಗಮನಕ್ಕೆ ತರುವ ದೂರುಗಳಿಗೆ ಎರಡು ತಿಂಗಳಲ್ಲಿ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಾರಿಗೆ ಸಚಿವ ನಿತನ್ ಗಡ್ಕರಿ ವಿಶೇಷವಾಗಿ ಪತ್ರ ಬರೆದು ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಲೋಕಸಭಾ ಸದಸ್ಯರ ಪಾತ್ರ ಹೆಚ್ಚಿದೆ. ಸ್ಥಳೀಯ ಸಮಸ್ಯೆಗಳ ಕುರಿತು ಸಪ್ತಾಹದಲ್ಲಿ ಚರ್ಚಿಸುವಂತೆ ತಿಳಿಸಿದ್ದಾರೆ. ಜಿಲ್ಲಾಡಳಿತ ರಸ್ತೆ ಸುರಕ್ಷತೆಯ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಮರಣ ಹೊಂದಿದವರಿಗಿಂತ, ಅಪಘಾತಗಳಲ್ಲಿ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿರುವುದು ವಿಷಾದನೀಯ.
ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿರುವ ವರದಿಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಲೋಹದ ಬ್ಯಾರಿಕೇಡ್ ನಿರ್ಮಾಣ, ಸಂಚಾರಿ ದೀಪಗಳ ಅಳವಡಿಕೆ, ಬಸ್ ನಿಲ್ದಾಣ, ಹೆದ್ದಾರಿಗಳಲ್ಲಿ ವಿದ್ಯುತ್ ದೀಪ ಅಳವಡಿಕೆ ಕಾರ್ಯ ಕೈಗೊಳ್ಳಬೇಕು. ನಗರದಲ್ಲಿ ಪುಟ್ ಪಾತ್ ನಿರ್ಮಾಣ , ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವೈಜ್ಞಾನಿಕ ಡಿವೈಡರ್ ತೆರವಿಗೆ ಸಮೀಕ್ಷೆ
ಸಭೆಯಲ್ಲಿ ಸಾರ್ವಜನಿಕರು ನಗರದಲ್ಲಿ ನಿರ್ಮಿಸಿರುವ ಡಿವೈಡರ್‌ಗಳಿಂದ ಉಂಟಾಗುತ್ತಿರುವ ತೊಂದರೆ ಅಪಘಾತಗಳ ಕುರಿತು ಸಚಿವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ನಾರಾಯಣ ಸ್ವಾಮಿ ಡಿವೈಡರ್ ಕುರಿತು ಸಮೀಕ್ಷೆ ಕೈಗೊಳ್ಳಲಾಗುವುದು. ಸಮೀಕ್ಷಾ ವರದಿಯಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಿಸಿರುವುದು ಕಂಡು ಬಂದರೆ ತೆರವು ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಸಹ ನಿರ್ಲಕ್ಷದಿಂದ ನಿಯಮ ಮೀರಿ ವಾಹನ ಚಲಾಯಿಸಬಾರದು. ಅತಿವೇಗದ ಚಾಲನೆ, ಕುಡಿದು ವಾಹನ ಚಾಲನೆ, ವಾಹನದಲ್ಲಿ ಪ್ರಯಾಣಿಸುವಾಗ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದಿರುವುದು ಪ್ರಾಣಾಂತಕವಾಗಬಹುದು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಜನವರಿ 11 ರಿಂದ 17 ರವರೆಗೆ ಒಂದು ವಾರ ವಿವಿಧ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದೆ. ರಸ್ತೆ ಸುರಕ್ಷತೆಯು ಜೀವ ಸುರಕ್ಷತೆಯೂ ಹೌದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಒತ್ತಡ, ಅವಸರದ ಜೀವನ ನಡೆಸುತ್ತಿದ್ದಾರೆ. ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ಹಲವಾರು ನಿಯಮಗಳನ್ನು ರೂಪಿಸಲಾಗಿದೆ. ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಜಾಗೃತಿ, ಅರಿವು ಮೂಡಿಸಲಾಗುತ್ತಿದೆ. ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬರಿಗೂ ರಸ್ತೆ ಸುರಕ್ಷತೆಯ ಜವಾಬ್ದಾರಿ ಇರಬೇಕು ಎಂದರು.
ವರ್ಷದಲ್ಲಿ 5 ಲಕ್ಷ ಮಂದಿ ರಸ್ತೆ ಅಪಘಾತಗಳಿಂದ ಮರಣ, ಅಂಗವಿಕಲರಾಗುತ್ತಾರೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ತುಂಬಾ ಅತಿ ಹೆಚ್ಚಿನ ಗಮನದಿಂದ ಸೀಟ್ ಬೆಲ್ಟ್ ಧರಿಸಿ, ಮದ್ಯಪಾನ ಮಾಡದೇ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ಕೇವಲ ಒಬ್ಬರಿಂದ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ. ಅಪಘಾತ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಿತ್ಯವೂ ನಿರಂತರವಾಗಿ ನಡೆಯಬೇಕು. ಇದು ಕೇವಲ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಮಾತ್ರವಲ್ಲದೇ ಎಲ್ಲ ಇಲಾಖೆ ಅಧಿಕಾರಿಗಳು, ಜನಸಾಮಾನ್ಯರು ಕೈಜೋಡಿಸಿದಾಗ ಮಾತ್ರ ಅಪಘಾತಗಳನ್ನು ಕಡಿಮೆ ಮಾಡಲು, ಅಪಘಾತ ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷವೂ ಡಿ.11 ರಿಂದ 17 ವರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯಾ ಇಲಾಖೆ ಮಟ್ಟದಲ್ಲಿ ಆಚರಿಸಲಾಗುತ್ತಿತ್ತು. ಅದರೆ ಈ ಬಾರಿ ಜನವರಿ 11 ರಿಂದ 17 ವರೆಗಿನ ಸಪ್ತಾಹವನ್ನು ಕೇಂದ್ರ ಸಚಿವರ ಇಚ್ಚೆಯಿಂದಾಗಿ ಪೊಲೀಸ್, ಸಾರಿಗೆ, ಹೆದ್ದಾರಿ ಪ್ರಾಧಿಕಾರ, ಕೆ.ಎಸ್.ಆರ್.ಟಿ.ಸಿ. ಸೇರಿದಂತೆ ಇತರೆ ನಿರ್ಮಾತೃ ಇಲಾಖೆಗಳ ಜೊತೆ ಆಚರಿಸಲಾಗುತ್ತಿದೆ. ಸಾವು ಸೂತಕ ಇದು ಯಾರಿಗೂ ಬರಬಾರದು. ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಮೇಲೆ ರಕ್ತ ಚೆಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 1.55 ಲಕ್ಷ ಜನರು ಅಪಘಾತದಲ್ಲಿ ಮರಣ ಹೊಂದಿದರೆ, 3.75 ಲಕ್ಷ ಜನರು ಶಾಶ್ವತ ಅಂಗವಿಕಲತೆಗೆ ತುತ್ತಾಗುತ್ತಿದ್ದಾರೆ.
ಕೊವೀಡ್‌ನಿಂದಾಗಿ ದೇಶದಲ್ಲಿ 5.30 ಲಕ್ಷ ಜನ ಮೃತರಾದರೆ, ಇಷ್ಟೇ ಸಂಖ್ಯೆಯ ಜನರು ಪ್ರತಿ ವರ್ಷ ಅಪಘಾತಕ್ಕೆ ತುತ್ತಾಗುತ್ತಾರೆ. ಕೋವಿಡ್‌ಗೆ ನಾವು ಸಿದ್ದವಾದಷ್ಟು ಅಪಘಾತಗಳ ಕುರಿತು ಸಿದ್ಧತೆ ಕಡಿಮೆಯಿದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ 396 ಮಾರಣಾಂತಿಕ ಅಪಘಾತದಲ್ಲಿ 415 ಜನರು ಮೃತರಾಗಿದ್ದಾರೆ. 2747 ಮಾರಣಾಂತಿಕವಲ್ಲದ ಅಪಘಾತದಲ್ಲಿ 1323 ಜನರು ಅಂಗವಿಕಲಕತೆ ಅಥವಾ ಗಂಭೀರ ತರಹದ ಗಾಯಗಳಿಗೆ ತುತ್ತಾಗಿದ್ದಾರೆ. ರಸ್ತೆ ಸುರಕ್ಷತೆಯಲ್ಲಿ ರಸ್ತೆ ನಿರ್ಮಾಣದ ಇಂಜಿನಿಯರಿಂಗ್, ಸಾರ್ವಜನಿಕರಿಗೆ ಅರಿವು, ರಸ್ತೆ ನಿಯಮಗಳ ಜಾರಿ ನಿರ್ದೇಶನ ಮುಖ್ಯವಾಗುತ್ತದೆ. ಇದುವರೆಗೂ ಜಿಲ್ಲೆಯಲ್ಲಿ 80 ಸಾವಿರ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ಜನರಲ್ಲಿ ರಸ್ತೆ ನಿಯಮ ಪಾಲನೆಗಾಗಿ ದಂಡ ವಿದಿಸುತ್ತಾರೆ ವಿನಃ ಸರ್ಕಾರಕ್ಕೆ ಆದಾಯ ತರುವುದಕ್ಕ ಅಲ್ಲ. ರಸ್ತೆ ಸುರಕ್ಷತೆಯಲ್ಲಿ ಸಾರ್ವಜನಿಕರ ಜೀವ ಹಾಗೂ ಆಸ್ತಿ ರಕ್ಷಣೆ ಮಾಡುವುದು ಮುಖ್ಯ. ರಸ್ತೆ ಅಪಘಾತದಲ್ಲಿ ತಪ್ಪೇ ಮಾಡದೇ ಇರುವವರೂ ಬೇರೊಬ್ಬರ ನಿರ್ಲಕ್ಷದಿಂದ ಶಿಕ್ಷೆ ಅನುಭವಿಸುತ್ತಾರೆ. ಪ್ರತಿಯೊಬ್ಬರು ರಸ್ತೆ ಸುರಕ್ಷತೆಗಾಗಿ ಚಾಲನಾ, ವಾಹನ ಪರವಾನಿಗೆ ಹಾಗೂ ವಾಹನ ವಿಮೆ ಪತ್ರಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಕೆಲವು ಅಪಘಾತ ಸಂದರ್ಭದಲ್ಲಿ ಈ ದಾಖಲೆಗಳು ಲಭ್ಯವಿಲ್ಲದ ಕಾರಣ ಪರಿಹಾರ ಮೊತ್ತ ದೊರಕುವುದಿಲ್ಲ ಎಂದರು.
ಜಿ.ಪಂ. ಸಿಇಓ ಎಂ.ಎಸ್ ದಿವಾಕರ ಮಾತನಾಡಿ ಸರ್ಕಾರ ನಾಗರೀಕ ಜೀವ ರಕ್ಷಣೆಗಾಗಿ ಸಾವಿರಾರು ಕೋಟಿಗಳನ್ನು ವ್ಯಯಿಸುತ್ತಿದೆ. ವಾಹನ ಚಾಲನೆ ಮಾಡುವವರು ಜಾಣರಾದರೆ ರಸ್ತೆ ಮೂರು ಭಾಗಗಳಾಗಿರುತ್ತದೆ. ಒಬ್ಬ ಜಾಣ ಒಬ್ಬ ದಡ್ಡನಾದರೆ ರಸ್ತೆ ಎರಡು ಭಾಗವಾಗುತ್ತದೆ. ಚಾಲನೆ ಮಾಡುವವರು ಇಬ್ಬರು ದಡ್ಡರಾದರೆ ರಸ್ತೆ ಒಂದಾಗಿ ಅಪಘಾತವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ರಸ್ತೆ ಅಪಘಾತದ ಗಾಯಾಳುಗಳ ಜೀವ ರಕ್ಷಕರಾದ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಡಿ.ರಂಗಸ್ವಾಮಿ ಮತ್ತು ಅವರ ತಂಡವನ್ನು ಸನ್ಮಾಸಿಲಾಯಿತು. ಕಲಾವಿದ ಡಿ.ಓ.ಮುರಾರ್ಜಿ ನಾಡಗೀತೆ ಪ್ರಸ್ತುತ ಪಡಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ , ಜಿಲ್ಲಾ ವೈದ್ಯಾಧಿಕಾರಿ ರೇಣುಪ್ರಸಾದ್ , ಕೆ.ಎಸ್.ಆರ್.ಟಿ.ಸಿ ಡಿಟಿಓ ಮಂಜುನಾಥ್ ಸೇರಿದಂತೆ ಮತ್ತಿತರು ಇದ್ದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಅಪಘಾತ ತಡೆಯಲು ಪರಿಹಾರ ಕ್ರಮಕ್ಕಾಗಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಪ್ರವಾಸಿ ಕಾರು ಚಾಲಕರು, ಬಸ್ ಮಾಲೀಕರು ಹಾಗೂ ಚಾಲಕರ ಸಂಘ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಸಲಹೆ ಪಡೆಯಲಾಯಿತು.
ಸಾರ್ವಜನಿಕರು ನೀಡಿದ ಸಲಹೆಗಳು ಇಂತಿವೆ:
• ಚಿತ್ರದುರ್ಗ ನಗರದಲ್ಲಿ ಜಾಗ ಕಿರುದಾಗಿದ್ದು, ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆಟೋ ನಿಲ್ದಾಣಕ್ಕಾಗಿ ಅಧಿಕಾರಿಗಳು ಸ್ಥಳ ಗುರುತು ಮಾಡಬೇಕು.
• ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಯ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆಗಳಲ್ಲಿ ಲೈಟಿಂಗ್ ವ್ಯವಸ್ಥೆ ಇಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಲೈಟಿಂಗ್ ವ್ಯವಸ್ಥೆ ಕಲ್ಪಿಸಬೇಕು.
• ಚಿತ್ರದುರ್ಗ ನಗರದಲ್ಲಿರುವ ಅವೈಜ್ಞಾನಿಕ ಡಿವೈಡರ್‍ಗಳನ್ನು ತೆರವುಗೊಳಿಸಬೇಕು
• ಶಾಲಾ-ಕಾಲೇಜುಗಳ ಬಳಿ ರಸ್ತೆ ಹುಬ್ಬು, ಸಿಗ್ನಲ್ ಲೈಟ್‍ಗಳ ಅಳವಡಿಕೆ ಮಾಡಬೇಕು.
• ಬೆಂಗಳೂರು ಮತ್ತು ದಾವಣಗೆರೆ ಹೆದ್ದಾರಿ ಮಧ್ಯೆ ಹಿರಿಯೂರು ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬೇಕು.
• ಚಿತ್ರದುರ್ಗ ನಗರದ ಚಳ್ಳಕೆರೆ ಬೈಪಾಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು.
• ಚಿತ್ರದುರ್ಗ ನಗರದ ಎಸ್‍ಬಿಐ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆಯು ಕಿರಿದಾಗಿದ್ದು, ಹಾಗಾಗಿ ಇಲ್ಲಿರುವ ಪಾರ್ಕಿಂಗ್ ವ್ಯವಸ್ಥೆ ತೆರವುಗೊಳಿಸಬೇಕು.