ಬಾಲಿವುಡ್ ಹಿರಿಯ ಗಾಯಕ ಉದಿತ್ ನಾರಾಯಣ್ ವಿರುದ್ಧ ದೂರು ದಾಖಲಾಗಿದೆ. ದೂರು ನೀಡೊದ್ದು ಹೊರಗಿನ ಜನರಲ್ಲ, ಅವರ ಹೆಂಡತಿಯೇ ದೂರು ನೀಡಿದ್ದಾರೆ. ಅವರ ಮೊದಲ ಪತ್ನಿ ರಂಜನಾ ನಾರಾಯಣ್ ಅವರು ಫೆಬ್ರವರಿ 10, ಮಂಗಳವಾರದಂದು ಉದಿತ್ ನಾರಾಯಣ್, ಅವರ ಸಹೋದರರಾದ ಸಂಜಯ್ ಕುಮಾರ್ ಝಾ, ಲಲಿತ್ ನಾರಾಯಣ್ ಝಾ ಮತ್ತು ಉದಿತ್ ಅವರ ಎರಡನೇ ಪತ್ನಿ ದೀಪಾ ನಾರಾಯಣ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಅರಿವಿಲ್ಲದಂತೆ ತನ್ನ ಗರ್ಭಾಶಯವನ್ನು (Uterus) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಲಾಗಿದೆ ಎಂದು ರಂಜನಾ ಆರೋಪಿಸಿದ್ದಾರೆ. ರಂಜನಾ ಅವರು ಈಗಾಗಲೇ ಸುಪೌಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗವು ಹಸ್ತಕ್ಷೇಪ ಮಾಡಿದಾಗ, ಉದಿತ್ ನಾರಾಯಣ್ ಅವರು ರಂಜನಾ ತನ್ನ ಪತ್ನಿ ಎಂದು ಒಪ್ಪಿಕೊಂಡಿದ್ದರು ಮತ್ತು ಜೊತೆಯಲ್ಲಿ ಇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಲ್ಲ ಎಂದು ರಂಜನಾ ಹೇಳಿದ್ದಾರೆ.
ಡಿಸೆಂಬರ್ 7, 1984 ರಂದು ಉದಿತ್ ನಾರಾಯಣ್ ಜೊತೆ ರಂಜನಾ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಗಾಯಕನಾಗಿ ವೃತ್ತಿಜೀವನ ರೂಪಿಸಿಕೊಳ್ಳಲು ಅವರು ಮುಂಬೈಗೆ ಹೋದ ನಂತರ, ದೀಪಾ ಎಂಬುವವರನ್ನು ಎರಡನೇ ಮದುವೆಯಾಗಿದ್ದಾರೆ. 2006ರಲ್ಲಿ ರಂಜನಾ ಮುಂಬೈಗೆ ಬಂದಾಗ ಉದಿತ್ ಮತ್ತು ಅವರ ಎರಡನೇ ಪತ್ನಿ ಮನೆಯೊಳಗೆ ಸೇರಿಸದೆ ಅವಮಾನಿಸಿ ಕಳುಹಿಸಿದ್ದರು. ನಂತರ ನೇಪಾಳದ ಅತ್ತೆ ಮನೆಯಿಂದಲೂ ಅವರನ್ನು ಹೊರಹಾಕಲಾಗಿತ್ತು. ಅಂದಿನಿಂದ ಅವರು ತಮ್ಮ ತವರು ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ರಂಜನಾ ಹೇಳಿದ್ದಾರೆ.
ಮಹಿಳಾ ಆಯೋಗದ ತನಿಖೆಯ ಪ್ರಕಾರ ಉದಿತ್ ನಾರಾಯಣ್ ರಂಜನಾ ಅವರಿಗೆ ತಿಂಗಳಿಗೆ 25,000 ರೂ. ನೀಡುತ್ತಿದ್ದಾರೆ. ಅವರಿಗೆ ಒಂದು ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಕೃಷಿ ಭೂಮಿಯನ್ನು ನೀಡಲಾಗಿದೆ.ರಂಜನಾ ಅವರು ಕೃಷಿ ಭೂಮಿಯಲ್ಲಿ ರೂಮ್ ನಿರ್ಮಿಸಿ ಬಾಡಿಗೆಗೆ ನೀಡಿದ್ದು, ಅಲ್ಲಿಂದಲೂ ಆದಾಯ ಪಡೆಯುತ್ತಿದ್ದಾರೆ.ಆದರೆ, ರಂಜನಾ ಅವರು ಕೇವಲ ಹಣವಲ್ಲದೆ ಪತ್ನಿಯಾಗಿ ಗೌರವಯುತವಾಗಿ ಅವರೊಂದಿಗೆ ಇರಲು ಬಯಸುತ್ತಿದ್ದಾರೆ. ಆದರೆ ಉದಿತ್ ನಾರಾಯಣ್ ಇದಕ್ಕೆ ಸಿದ್ಧರಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.
ರಂಜನಾ ನೀಡಿರುವ ದೂರು ಸುಮಾರು 30 ವರ್ಷಗಳಷ್ಟು ಹಳೆಯದಾದ ಘಟನೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಮೊದಲು ಹಳೆಯ ಪ್ರಕರಣಗಳನ್ನು ಪರಿಶೀಲಿಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


