ಜನವರಿ 20 ಹಾಗೂ 21 ರಂದು ವಾಣಿಜ್ಯ ತೆರಿಗೆ ಪರೀವೀಕ್ಷಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ : ಎಲ್ಲಾ ರೀತಿಯ ಉಪಕರಣಗಳ ಬಳಕೆಗೆ ನಿಷೇಧ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

3 Min Read

ಚಿತ್ರದುರ್ಗ .ಜ.18: ಜನವರಿ 20 ಹಾಗೂ 21 ರಂದು ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ನೇಮಕಾತಿಗಾಗಿ ಕೆ.ಪಿ.ಎಸ್.ಸಿ (ಕರ್ನಾಟಕ ಲೋಕಸೇವಾ ಆಯೋಗ) ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕೇಂದ್ರಗಳಿಗೆ ಅಭ್ಯರ್ಥಿಗಳು ಮೊಬೈಲ್, ಕ್ಯಾಲ್ಯುಕಲೇಟರ್, ಬ್ಲೂಟೂತ್, ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ ಯಾವುದೇ ರೀತಿ ಗ್ಯಾಜೆಟ್‌ಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ತಡೆಯಲು ಮೊಬೈಲ್ ಜಾಮರ್ ಹಾಗೂ ಸಿ.ಸಿ.ಟಿ.ವಿ ಅಳವಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರೀಕ್ಷಾ ಸಂಬಂಧ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳನ್ನು ಪ್ರವೇಶ ಪತ್ರದಲ್ಲಿಯೂ ಸ್ಪಷ್ಟವಾಗಿ ಮುದ್ರಿಸಲಾಗಿದೆ. ಅಭ್ಯರ್ಥಿಗಳು ಈ ನಿಬಂಧನೆಗಳಿಗೆ ಆನ್‌ಲೈನ್ ಮೂಲಕ ಒಪ್ಪಿಗೆ ಸೂಚಿಸಿದ ನಂತರವೇ ಪ್ರವೇಶ ಪತ್ರದ ಮುದ್ರಣದ ಪ್ರತಿ ಲಭ್ಯವಾಗುತ್ತದೆ. ಇದರ ಅನ್ವಯ ಅಭ್ಯರ್ಥಿಗಳು ಶೂ, ಸಾಕ್ಸ್, ಸ್ವೆಟರ್, ಜರ್ಕಿನ್, ಬ್ಲೂಟುತ್, ವೈಟ್ ಪ್ಲೂಯಿಡ್, ವೆರೆಲೆಸ್ ಸೆಟ್, ಪೇಪರ್, ಬುಕ್ಸ್, ತುಂಬು ತೋಳಿನ ಶರ್ಟ್, ಟಿ ಶರ್ಟ್ ಹಾಗೂ ಯಾವುದೇ ರೀತಿ ಆಭರಣಗಳನ್ನು ಧರಿಸುವಂತಿಲ್ಲ. ಕುಡಿಯುವ ನೀರಿನ ಬಾಟೆಲ್, ಕಿವಿ ಹಾಗೂ ಬಾಯಿ ಮುಚ್ಚಿಕೊಳ್ಳುವಂತಿರುವ ಫ್ಲಿಲ್ಟರ್ ಇರುವ ಪೇಸ್ ಮಾಸ್ಕ್ ಗಳನ್ನು ಸಹ ನಿಷೇಧಿಸಲಾಗಿದೆ.

ಅಭ್ಯರ್ಥಿಗಳು ಸದಾ ಉಡುಗೆಯಲ್ಲಿ ಪರೀಕ್ಷೆ ಬರೆಯಲು ಆಗಮಿಸಬೇಕು. ಮದುವೆಯಾದ ಹೆಣ್ಣುಮಕ್ಕಳು ಮಂಗಳಸೂತ್ರ ಹಾಗೂ ಕಾಲುಂಗುರ ಧರಿಸಿ ಬರಲು ಅವಕಾಶವಿದೆ. ಈ ನಿಬಂಧನೆಗಳನ್ನು ಅಭ್ಯರ್ಥಿಗಳು ಪಾಲಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.
ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಇದಕ್ಕೆ ಪೂರಕವಾಗಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುಂಚೆ ಸೂಕ್ತವಾಗಿ ತಪಾಸಣೆ ನಡೆಸಬೇಕು. ಖಜಾನೆ ಅಧಿಕಾರಿ, ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕು ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪ್ರತಿ ಕೊಠಡಿಯಲ್ಲಿ ಸಿ.ಸಿ.ಟಿ.ವಿ ಅಳವಡಿಸಿರುವುದರಿಂದ ಮೇಲ್ವಿಚಾರಕರು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

ಪರೀಕ್ಷಾ ಕಾರ್ಯ ಮುಗಿದ ನಂತರ ಬೆಳಗಿನ ಅವಧಿ ಉತ್ತರ ಪತ್ರಿಕೆಗಳನ್ನು ಮತ್ತು ಮಧ್ಯಾಹ್ನ ಅವಧಿಯ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಅಧಿವೇಶನವಾರು ಆಯಾ ಅಧೀವೇಶನದ ಪರೀಕ್ಷೆ ಮುಗಿದ ನಂತರ ಅಂಚೆ ಕಚೇರಿಯ ಮೂಲಕ ಆಯೋಗಕ್ಕೆ ಸುರಕ್ಷಿತವಾಗಿ ತಲುಪಿಸಬೇಕು. ಅಂಚೆ ಇಲಾಖೆ ಅಧಿಕಾರಿಗಳಿಗೆ ಸಂಜೆ 6 ಗಂಟೆಯವರೆಗೂ ಪ್ರಧಾನ ಅಂಚೆ ಕಚೇರಿಯನ್ನು ತರೆದು ಸಹರಿಸುವಂತೆ ಅಪರ ಜಿಲ್ಲಾಧಿಕಾರಿ ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸಿ, ಆರೋಗ್ಯ ತಪಾಸಣೆಗಾಗಿ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಜಾಮರ್, ಸಿ.ಸಿ.ಟಿ.ವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಪೊಲೀಸ್ ಇಲಾಖೆ ವತಿಯಿಂದ ಪ್ರತಿ ಪರೀಕ್ಷಾ ಕೇಂದ್ರಗಳಿ ಪೊಲೀಸ್ ಸಿಬ್ಬಂದಿ ಹಾಗೂ ತಪಾಸಣೆಗಾಗಿ ಒರ್ವ ಪುರಷ ಹಾಗೂ ಒರ್ವ ಮಹಿಳಾ ಗೃಹ ರಕ್ಷಕರನ್ನು ಹೆಚ್ಚುವರಿಯಾಗಿ ನೇಮಿಸುವಂತೆ ನಿರ್ದೇಶನ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ ಮಾತನಾಡಿ, ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ, ಸಂಬಂಧಪಟ್ಟ ಪರೀಕ್ಷಾ ಕೇಂದ್ರ ಮೇಲ್ವಿಚಾರಕರು ತಕ್ಷಣೆ ಪೊಲೀಸರಿಗೆ ಕರೆ ಮಾಡಿ ತಿಳಿಸುವಂತೆ ಹೇಳಿದರು.

ಜನವರಿ 20 ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಕನ್ನಡ ಭಾಷಾ ಪರೀಕ್ಷೆ ನಗರದ 10 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 3631 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜನವರಿ 21 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಜ್ಞಾನದ ಪರೀಕ್ಷೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ವಿಷಯಗಳ ಪರೀಕ್ಷೆ ಒಟ್ಟು 14 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 5337 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಶೇಖರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಡಯಟ್ ಉಪನಿರ್ದೆಶಕ ನಾಸಿರುದ್ದಿನ್ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಾಧಿಕಾರಿಗಳು, ಜಿಲ್ಲಾ ಖಜನಾಧಿಕಾರಿಗಳು, ಅಂಚೆ ಇಲಾಖೆ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *