ಸುದ್ದಿಒನ್, ಚಿತ್ರದುರ್ಗ, ಜೂನ್. 27 : ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ದೌರ್ಜನ್ಯ ವಿರೋಧಿಸಿ ದೇವನಹಳ್ಳಿಯಲ್ಲಿ ಕಳೆದ 25 ರಂದು ಹೋರಾಟ ನಡೆಸಿದ ರೈತರನ್ನು ಬಂಧಿಸಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ)ದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಬಂಧಿಸಿರುವ ರೈತರನ್ನು ಕೂಡಲೆ ಬಿಡುಗಡೆಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿ ವಿರುದ್ದ
ಧಿಕ್ಕಾರಗಳನ್ನು ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸದಸ್ಯ ಡಿ.ಎಂ.ಮಲಿಯಪ್ಪ ಕಾರ್ಪೊರೇಟ್ ಕಂಪನಿ, ಭೂ ಮಾಲೀಕರ ಪರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವನಹಳ್ಳಿ ಸಮೀಪವಿರುವ ಚನ್ನರಾಯಪಟ್ಟಣದ ಸುತ್ತಮುತ್ತ ಹದಿಮೂರು ಹಳ್ಳಿಗಳಲ್ಲಿ ರೈತರ ಜಮೀನ ವಶಪಡಿಸಿಕೊಳ್ಳುವುದಕ್ಕೆ ಅಂಕಿತ ಹಾಕಲು ಮುಂದಾಗಿರುವುದನ್ನು ನೋಡಿದರೆ ಐವತ್ತು ವರ್ಷಗಳ ಹಿಂದೆ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ನೆನಪಾಗುತ್ತದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಪರವಾಗಿರಬೇಕಾಗಿದ್ದ ರಾಜ್ಯ ಸರ್ಕಾರ ಉದ್ಯಮಿಗಳ ಪರವಾಗಿದೆ. ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು 1180 ದಿನಗಳಿಂದ ಮುಷ್ಕರ ನಡೆಸುತ್ತಿರುವ ರೈತರು, ಮಹಿಳೆಯರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾದಿತೆಂದು ಎಚ್ಚರಿಸಿದರು.
ಪೊಲೀಸರ ಮೂಲಕ ರೈತರು, ಮಹಿಳೆಯರ ಮೇಲೆ ದೌರ್ಜನ್ಯವೆಸಗಿದರೆ ನಾವುಗಳು ಸಹಿಸುವುದಿಲ್ಲ. ಬಂಧಿತ ರೈತರನ್ನು ಕೂಡಲೆ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆಂದರು.
ನಿಂಗಮ್ಮ ಮಾತನಾಡುತ್ತ ದೇವನಹಳ್ಳಿಯಲ್ಲಿ ಹೋರಾಟ ನಡೆಸಿದ ರೈತರು, ಮಹಿಳೆಯರು ಹಾಗೂ ಕಾರ್ಮಿಕರಿಗೆ ರಾಜ್ಯ ಸರ್ಕಾರ ಅಪಮಾನವೆಸಗಿದೆ. ಬಲವಂತವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಅಧಿಕಾರ ರಾಜ್ಯದ ಮುಖ್ಯಮಂತ್ರಿಗಿಲ್ಲ. ಬಂಧಿಸಿರುವ ರೈತರನ್ನು ತಕ್ಷಣವೆ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ದೊಡ್ಡ ಹೋರಾಟ ನಡೆಸಬೇಕಾಗುತ್ತದೆಂದು ಗಡುವು ನೀಡಿದರು.
ಸಿ.ಕೆ.ಗೌಸ್‍ಪೀರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಭೂಮಿ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ಹೋರಾಟ ನಡೆಸುತ್ತಿದ್ದ ರೈತರು, ಸಿ.ಐ.ಟಿ.ಯು.ಮುಖಂಡರುಗಳನ್ನು ರಾಜ್ಯ ಸರ್ಕಾರ ಬಂಧಿಸಿ ದಬ್ಬಾಳಿಕೆ ನಡೆಸುತ್ತಿದೆ. ಭೂಮಿ ನಮ್ಮ ಹಕ್ಕು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಕೇಂದ್ರ ಬಿಜೆಪಿ. ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ರೈತ ಹಾಗೂ ಕಾರ್ಮಿಕ ವಿರೋಧಿಗಳಾಗಿವೆ ಎಂದು ದೂರಿದರು.
ಜಿಲ್ಲಾ ಸದಸ್ಯ ಟಿ.ತಿಪ್ಪೇಸ್ವಾಮಿ ಮಾತನಾಡುತ್ತ ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖವಾಡ ಕಳಚಿದೆ. ರೈತರು ಕಾರ್ಮಿಕರು, ಮಹಿಳೆಯರ ವಿರೋಧಿಯಾಗಿದ್ದಾರೆ. ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ರಾಜ್ಯ ಸರ್ಕಾರ ಉಚಿತ ಗ್ಯಾರೆಂಟಿಗಳ ಮೇಲೆ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುತ್ತಿದೆ. ಬಂಧಿಸಿರುವ ರೈತರು, ಸಿ.ಐ.ಟಿ.ಯು. ಮುಖಂಡರುಗಳನ್ನು ಬಿಡುಗಡೆಗೊಳಿಸದಿದ್ದರೆ ಮುಂದೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆಂದರು.
ಟಿ.ನಿಂಗಣ್ಣ, ಹೆಚ್.ಓ.ನಾಗರಾಜ್, ನಿರ್ಮಲ, ಮಂಜಮ್ಮ, ಕಲ್ಯಾಣಮ್ಮ, ಸೀಬಾ, ಆಶಾ, ರೇಣುಕ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






