ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ನಗರಘಟ್ಟದಲ್ಲಿರುವ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಿಜೆಪಿ ವತಿಯಿಂದ ಗುರುವಾರ ಬೂತ್ ಸಮಿತಿ ಸಭೆ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಬೂತ್ ಸಮಿತಿ ಸಭೆಯಲ್ಲಿ ಚರ್ಚಿಸಿ ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನೇ ಕೊರೋನಾ ಮಹಾಮಾರಿ ಕಾಡುತ್ತಿರುವ ಅಪಾಯಕಾರಿ ಪರಿಸ್ಥಿತಿಯಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿರವರು ಪ್ರತಿ ಪ್ರಜೆಗೂ ಉಚಿತವಾಗಿ ಲಸಿಕೆ ನೀಡಿದ್ದರಿಂದ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ.
ರೈತರಿಗೆ ಉಪಯೋಗವಾಗುವ ಕಿಸಾನ್ ಸಮ್ಮಾನ್, ನಿರ್ಮಲ ಭಾರತ ಯೋಜನೆಯಡಿ ಗ್ರಾಮಗಳ ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು 14 ಸಾವಿರ ರೂ.ಗಳ ನೆರವು ಕೇಂದ್ರದಿಂದ ಸಿಕ್ಕಿದೆ. 109 ಕಾಯಿಲೆಗಳಿಗೆ ಔಷಧಿಗಳನ್ನು ನೀಡಲಾಗಿದೆ. ಇಷ್ಟೆಲ್ಲಾ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಪ್ರತಿ ಮನೆ ಮನೆಗೂ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಒಂದು ಕಾಲದಲ್ಲಿ ರೈತರ ಕೈಯಲ್ಲಿ ಬೀಜ ಗೊಬ್ಬರಕ್ಕೆ ಹಣವಿರುತ್ತಿರಲಿಲ್ಲ. ಬೇರೆಯವರ ಬಳಿ ಹೋಗಿ ಕೈಗಡ ಪಡೆಯಬೇಕಿತ್ತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಣ್ಣ ರೈತರ ನೆರವಿಗಾಗಿ ಕೇಂದ್ರ ಆರು ಸಾವಿರ, ರಾಜ್ಯ ನಾಲ್ಕು ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದೆ. ಆಯುಷ್ಮಾನ್ ಕಾರ್ಡ್‍ನಿಂದಾಗುವ ಉಪಯೋಗ ಕುರಿತು ಬೂತ್ ಸಮಿತಿ ಸಭೆಯಲ್ಲಿ ಚರ್ಚಿಸಿ ಬೂತ್ ಸಮಿತಿಗಳು ಗಟ್ಟಿಯಾದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ. ಹಾಗಾಗಿ ಸಕ್ರಿಯವಾಗಿ ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು.
ಬಿಜೆಪಿ ಯುವ ಮುಖಂಡ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಅನಿತ್ ಸಭೆಯಲ್ಲಿ ಚರ್ಚಿಸುತ್ತ ಮುಂದುವರೆದ ಅಮೇರಿಕಾ ದೇಶದಲ್ಲಿ ಜನರಿಗೆ ಕೋವಿಡ್ ವಿರುದ್ದ ಲಸಿಕೆ ನೀಡಲು ಹಣವಿಲ್ಲದಂತಾಗಿದೆ. ಅದೇ ನಮ್ಮ ದೇಶದಲ್ಲಿ ಪ್ರತಿ ಪ್ರಜೆಗೆ ಎರಡನೆ ಬಾರಿ ಲಸಿಕೆ ನೀಡಿ ಬೂಸ್ಟರ್ ಡೋಸ್‍ಗಳನ್ನು ಕೊಡಲಾಗಿದೆ. ಇದಕ್ಕೆ ದೇಶದ ಬಗ್ಗೆ ಪ್ರಧಾನಿ ಮೋದಿರವರಲ್ಲಿರುವ ಕಾಳಜಿಯೇ ಕಾರಣ ಎಂದು ಗುಣಗಾನ ಮಾಡಿದರು.
ಭಾರತದಲ್ಲಿ ಎಲ್ಲರಿಗೂ ಲಸಿಕೆ ನೀಡಿ ಉಳಿದ ಲಸಿಕೆಯನ್ನು ಮೋದಿರವರು ಅಮೇರಿಕಾಗೂ ಸರಬರಾಜು ಮಾಡಿದ್ದಾರೆಂದರೆ ನಮ್ಮ ದೇಶ ಎಷ್ಟು ಬಲಶಾಲಿಯಾಗಿದೆ ಎನ್ನುವುದನ್ನು ಬೂತ್ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಮುಟ್ಟಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರನ್ನು ಗುರುತಿಸಿ ಸರ್ಕಾರದ ಯೋಜನೆಗಳು ತಲುಪಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಬೂತ್ ಸಶಕ್ತ ಸಮಿತಿ ಜಿಲ್ಲಾ ಸಂಚಾಲಕ ಮಂಜು ಮಾಳಿಗೆ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಮಾಧ್ಯಮ ವಕ್ತಾರ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಉಸ್ತುವಾರಿ ದಗ್ಗೆ ಶಿವಪ್ರಕಾಶ್, ಹೊಳಲ್ಕೆರೆ ಮಂಡಲ ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ಬೂತ್ ಸಶಕ್ತ ಸಮಿತಿ ಮಂಡಲ ಸಂಚಾಲಕ ಚಿತ್ರಹಳ್ಳಿ ದೇವರಾಜ್, ಯುವ ಮೋರ್ಚ ಮಂಡಲ ಅಧ್ಯಕ್ಷ ಅರುಣ್‍ನುಲೇನೂರ್, ಸುಶೀಲಭಾಯಿ ಸೇರಿದಂತೆ ನಗರಗಟ್ಟ ಗ್ರಾಮ ಬೂತ್ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.