ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ಪಾರಂಪರಿಕ ವೈದ್ಯ ಸೇವೆ ಜನ ಸಾಮಾನ್ಯರಿಗೆ ಬೇಕು ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಹೇಳಿದರು.
ಪಾರಂಪರಿಕ ವೈದ್ ಪರಿಷತ್ ಕರ್ನಾಟಕ ಜಿಲ್ಲಾ ಘಟಕದಿಂದ ಕಬೀರಾನಂದಾಶ್ರಮದಲ್ಲಿ ಶನಿವಾರ ನಡೆದ ಧನ್ವಂತರಿ ಜಯಂತಿ ಹಾಗೂ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಪಾರಂಪರಿಕ ವೈದ್ಯರ ಸೇವೆ ಕಡಿಮೆಯಾಗುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಪದ್ದತಿಯಲ್ಲಿ ಅನೇಕ ಗಿಡಮೂಲಿಕೆಗಳಿಂದ ಔಷಧಿ ನೀಡಲಾಗುತ್ತದೆ. ಹಾಗಾಗಿ ಪಾರಂಪರಿಕ ವೈದ್ಯರ ಸೇವೆ ಅತ್ಯವಶ್ಯಕ ಎಂದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಋಷಿಮುನಿಗಳ ಕಾಲದ ಪಾರಂಪರಿಕ ವೈದ್ಯ ಪದ್ದತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಗಿಡಮೂಲಿಕೆಗಳಿಂದ ನಾನಾ ರೀತಿಯ ಕಾಯಿಲೆಗಳನ್ನು ಗುಣಪಡಿಸಬಹುದು ಎಂದರು.ಮೇದಾರ ಕೇತೇಶ್ವರ ಮಠದ ಕೇತೇಶ್ವರ ಸ್ವಾಮಿ ಮಾತನಾಡುತ್ತ ಎಲ್ಲರೂ ಇಂಗ್ಲಿಷ್ ಮೆಡಿಸಿನ್ ತೆಗೆದುಕೊಳ್ಳುತ್ತಿರುವುದರಿಂದ ಪಾರಂಪರಿಕ ವೈದ್ಯ ಪದ್ದತಿಗೆ ಬೇಡಿಕೆ ಇಲ್ಲದಂತಾಗಿದೆ. ಋಷಿಮುನಿಗಳ, ಆದಿಮಾನವ ಕಾಲದಿಂದಲೂ ಈ ಪದ್ದತಿಯದೆ. ಕೇವಲ ಮನುಷ್ಯನಿಗಷ್ಟೆ ಅಲ್ಲ. ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಇದರ ಪ್ರಯೋಜನವಾಗಲಿದೆ. ಗಿಡಮೂಲಿಕೆ ಬಗ್ಗೆ ಯಾರಲ್ಲಿಯೂ ಭಯಬೇಡ, ಜೀವಕ್ಕೆ ತೊಂದರೆಯಾಗುವುದಿಲ್ಲ. ಪ್ರತಿಯೊಂದು ಗಿಡದಲ್ಲೂ ಔಷಧೀಯ ಗುಣಗಳಿರುವುದಿಂದ ಪಾರಂಪರಿಕ ವೈದ್ಯ ಪದ್ದತಿಯನ್ನು ಎಲ್ಲರೂ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ವೈದ್ಯರತ್ನ ಪ್ರಶಸ್ತಿ ಪುರಸ್ಕøತ ಡಾ.ಸುದರ್ಶನ್ ಮಾತನಾಡಿ ಪಂಚಕರ್ಮ ಚಿಕಿತ್ಸೆಯಿಂದ ಬಹಳಷ್ಟು ವರ್ಷಗಳ ಕಾಲ ಬದುಕಬಹುದು. ಋಷಿಮುನಿಗಳಿಂದ ಬಂದಿರುವ ಪಾರಂಪರಿಕ
ವೈದ್ಯ ಪದ್ದತಿಯಲ್ಲಿ ಎಂಟು ಭಾಗಗಳಿವೆ. ಧನ್ವಂತರಿ ಆಯುರ್ವೇದದಿಂದ ಅಸಾಧ್ಯವು ಸಾಧ್ಯವಾಗುತ್ತದೆ. ಧನ್ವಂತರಿ ಎಂದರೆ ಪ್ರಕೃತಿ ಜ್ಞಾನ. ಪಾರಂಪರಿಕ ವೈದ್ಯರು ಪ್ರಪಂಚದಲ್ಲಿಯೇ ಮುಂದಿದ್ದಾರೆ.
ಮೂರು ಸಾವಿರ ವರ್ಷದ ಕೆಳಗೆ ಭರತಖಂಡದಲ್ಲಿ ಉನ್ನತ ಮಟ್ಟದಲ್ಲಿತ್ತು ಎಂದು ಹೇಳಿದರು.ಆಯುಷ್ ಆರೋಗ್ಯಾಧಿಕಾರಿ ಡಾ.ಪ್ರಶಾಂತ್‍ಕುಮಾರ್ ಮಾತನಾಡುತ್ತ ಆಯುರ್ವೇದ ನಿರಂತರವಾಗಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿ 36 ಆಯುರ್ವೇದ ಆಸ್ಪತ್ರೆಗಳಿವೆ. ಪಂಚಕರ್ಮ ಚಿಕಿತ್ಸೆ ಕೂಡ ಸಿಗುತ್ತದೆ.
ಸರ್ಕಾರದಿಂದ ಐದು ಕಾರ್ಯಕ್ರಗಳಿದ್ದು, ಚಿತ್ರದುರ್ಗ, ಮದಕರಿಪುರ, ಹೋಬಳಾಪುರ, ಚಳ್ಳಕೆರೆ, ಮೊಳಕಾಲ್ಮರುಗಳಲ್ಲಿ ಲಭ್ಯವಿದೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬಹುದೆಂದು ವಿನಂತಿಸಿದರು.ಧನ್ವಂತರಿ ಜಯಂತಿಯ ಅಧ್ಯಕ್ಷತೆ ವಹಿಸಿದ್ದ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಹೆಚ್.ಎನ್.ರಾಮಮೂರ್ತಿ ಮಾತನಾಡಿ ಪಾರಂಪರಿಕ ವೈದ್ಯರುಗಳು ಭಯದಿಂದ ಬದುಕುವಂತಾಗಿದೆ. ಸರ್ಕಾರ ಕಾನೂನು ಬಿಗಿಗೊಳಿಸಬಾರದು. ನಿರ್ಭಯವಾಗಿ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಲು ಅವಕಾಶ ಕೊಡಬೇಕು. ಗಧಾ ಪ್ರಹಾರ ಮಾಡಬಾರದು. ಪಾರಂಪರಿಕ ವೈದ್ಯರು ಕಣ್ಣಿಗೆ ಕಾಣದಂತೆ ಸೇವೆ ಮಾಡುತ್ತಿದ್ದಾರೆಂದು ತಿಳಿಸಿದರು.
ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತ ಸಹಸ್ರಾರು ವರ್ಷಗಳಿಂದಲೂ ಆಯುರ್ವೇದ ಪದ್ದತಿಯಿದೆ. ಈಗ ಕಡಿಮೆಯಾಗುತ್ತಿದೆ. ಪ್ರಧಾನಿ ಮೋದಿ ಪಾರಂಪರಿಕ ವೈದ್ಯ ಪದ್ದತಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ.
ಗಿಡಮೂಲಿಕೆಗಳಿಂದ ತಯಾರಿಸುವ ಔಷಧಿಯಲ್ಲಿ ಅಡ್ಡಪರಿಣಾಮಗಳಿರುವುದಿಲ್ಲ. ಸೀತ, ಕೆಮ್ಮ, ನೆಗಡಿಗೆ ಕಷಾಯ ಕುಡಿದರೆ ಶೀಘ್ರವೇ ವಾಸಿಯಾಗುತ್ತದೆ ಎಂದರು. ಪಾರಂಪರಿಕ ವೈದ್ಯ ಮುಜೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನ್ಯಾಯವಾದಿ ನರಹರಿ ವೇದಿಕೆಯಲ್ಲಿದ್ದರು. ಜಿ.ಎರ್ರಿಸ್ವಾಮಿ ಪ್ರಾರ್ಥಿಸಿದರು. ಪಾರಂಪರಿಕ ವೈದ್ಯ ಪರಿಷತ್‍ನ ಕಾರ್ಯದರ್ಶಿ ಕೆ.ವೀರಣ್ಣ ಸ್ವಾಗತಿಸಿದರು.