ನವದೆಹಲಿ : ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಮತ್ತು ವ್ಯಾಪಾರಿಗಳಿಗೆ ತೈಲ ಕಂಪನಿಗಳು ಶಾಕ್ ನೀಡಿವೆ. ನವೆಂಬರ್ 1ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ದರ 10 ರೂ. ಏರಿಕೆಯಾಗಿದೆ. ಆದರೆ, ಗೃಹಬಳಕೆಯ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದು ಸಾರ್ವಜನಿಕರಿಗೆ ಕೊಂಚ ಸಮಾಧಾನ ತಂದಿದೆ.
ಹೋಟೆಲ್, ರೆಸ್ಟೋರೆಂಟ್‌ಗಳು ಹಾಗೂ ಆಹಾರ ಮಳಿಗೆಗಳಲ್ಲಿ ಬಳಸುವ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರಗಳು ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಏರಿಕೆಯಾಗುತ್ತಲೇ ಇದ್ದು, ಈ ತಿಂಗಳೂ ಅದೇ ಹಾದಿ ಮುಂದುವರಿದಿದೆ. ಹಬ್ಬದ ಹೊತ್ತಲ್ಲೇ ದರ ಏರಿಕೆಯಾಗಿರುವುದು ಹೋಟೆಲ್ ಉದ್ಯಮಿಗಳಿಗೆ ಹಾಗೂ ಆಹಾರ ಮಳಿಗೆಗಳ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ. ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಅನಿಲ ದರಗಳನ್ನು ಪರಿಷ್ಕರಿಸುವ ಪರಿಪಾಠ ಹೊಂದಿದ್ದು, ಅದರಂತೆ ಇಂದಿನಿಂದ ನೂತನ ದರಗಳು ಜಾರಿಗೆ ಬಂದಿವೆ.
ಪ್ರಮುಖ ನಗರಗಳಲ್ಲಿನ ಹೊಸ ದರಗಳ ವಿವರ
ದೆಹಲಿ: 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹10 ಏರಿಕೆಯಾಗಿದ್ದು, ₹2,820ಕ್ಕೆ ತಲುಪಿದೆ.
ಮುಂಬೈ: ₹10 ಹೆಚ್ಚಳದೊಂದಿಗೆ ₹2,774.50ಕ್ಕೆ ಮಾರಾಟವಾಗುತ್ತಿದೆ.
ಕೋಲ್ಕತ್ತಾ: ₹10 ಏರಿಕೆಯಾಗಿದ್ದು, ಪ್ರಸ್ತುತ ದರ ₹2,964 ಆಗಿದೆ.
ಚೆನ್ನೈ: ₹11.50 ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್‌ಗೆ ₹2,994.50 ನಿಗದಿಯಾಗಿದೆ.
ಮೆಟ್ರೋ ನಗರಗಳ ಪೈಕಿ ಚೆನ್ನೈನಲ್ಲಿ ಸಿಲಿಂಡರ್ ಬೆಲೆ ಅತಿ ಗರಿಷ್ಠ ಮಟ್ಟದಲ್ಲಿದ್ದರೆ, ಮುಂಬೈನಲ್ಲಿ ಕನಿಷ್ಠ ದರವಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದಿಂದಾಗಿ ಹಬ್ಬದ ಋತುವಿನಲ್ಲಿ ಸಿಹಿತಿಂಡಿಗಳು ಹಾಗೂ ಹೋಟೆಲ್ ತಿನಿಸುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.











