ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿರುವುದಕ್ಕೆ ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿ ಸ್ವಾಗತಿಸಿದೆ.
ಮಧ್ಯಕರ್ನಾಟಕದ ಬಯಲುಸೀಮೆ ಅತ್ಯಂತ ಹಿಂದುಳಿದಿರುವ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಬಡವರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತಾಗಲಿ ಎನ್ನುವುದು ನಮ್ಮ ಹೋರಾಟದ ಮುಖ್ಯ ಗುರಿಯಾಗಿತ್ತು. ಅದಕ್ಕಾಗಿ ಒಂದು ದಶಕದಿಂದ ಸರ್ಕಾರವನ್ನು ಆಗ್ರಹಪಡಿಸುತ್ತಿದ್ದೇವು. ರಾಜ್ಯ ಸರ್ಕಾರ ಕೈಗೊಂಡಿರುವ ಈ ತೀರ್ಮಾನದಿಂದ ನಮಗೆ ಅತೀವ ಸಂತಸವಾಗಿದೆ.
ಹಿಂದಿನ ಸರ್ಕಾರದ ಸಚಿವರುಗಳನ್ನು ಭೇಟಿ ಮಾಡಿ ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವಂತೆ ಅನೇಕ ಪ್ರತಿಭಟನೆ ನಡೆಸಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್, ಜೆಡಿಎಸ್.ಸಮ್ಮಿಶ್ರ ಸರ್ಕಾರ ಬೆಳಗಾವಿಯಲ್ಲಿ ನಡೆಸಿದ ಅಧಿವೇಶನಕ್ಕೂ ಹೋಗಿ ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿಯಿಂದ ಒಂದು ದಿನದ ಧರಣಿ ನಡೆಸಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ನಮ್ಮ ಜಿಲ್ಲೆಯ ಎಲ್ಲಾ ಶಾಸಕರನ್ನು ಭೇಟಿಯಾಗಿ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದೆವು.
ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಚಿತ್ರದುರ್ಗಕ್ಕೆ ಆಗಮಿಸಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ ಸಲ್ಲಿಸಿದಾಗಲೂ ಸಮಿತಿಯಿಂದ ನಾವುಗಳು ಮನವಿ ಅರ್ಪಿಸಿ ಬಡ ಜಿಲ್ಲೆ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಅತ್ಯವಶ್ಯಕವಾಗಿ ಮಂಜೂರಾಗಬೇಕೆಂದು ಒತ್ತಾಯಿಸಿದ್ದೆವು.
ನಮ್ಮ ಹೋರಾಟವನ್ನು ಪರಿಗಣಿಸಿ ವೈದ್ಯಕೀಯ ಕಾಲೇಜು ಆರಂಭಿಸಲು ಐದು ನೂರು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿರುವುದಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿ ಗೌರವಾಧ್ಯಕ್ಷ ಜಿ.ಎಸ್.ಉಜ್ಜಿನಪ್ಪ, ಅಧ್ಯಕ್ಷ ಡಾ.ಚಂದ್ರಮೋಹನ್ ಜಿ, ಪ್ರಧಾನ ಕಾರ್ಯದರ್ಶಿ ಎನ್.ರಮಾ ನಾಗರಾಜ್, ಖಜಾಂಚಿ ಹೆಚ್.ಎನ್.ನಾಗರಾಜ್ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಒಂದು ದಿನದ ಧರಣಿ ನಡೆಸಿದಾಗ ನಮಗೆ ಸಹಕರಿಸಿದ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಅಲ್ಲಿದ್ದ ನಮ್ಮ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೂ ಮತ್ತು ನಮ್ಮ ಹೋರಾಟಕ್ಕೆ ಸದಾ ಪ್ರೋತ್ಸಾಹವಾಗಿ ನಿಂತಿರುವ ಮಾಧ್ಯಮದವರಿಗೂ ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿ ಕೃತಜ್ಞತೆಗಳನ್ನು ಸಲ್ಲಿಸಿದೆ.