ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಫೆ.17) : ಕೇಂದ್ರ ಸರ್ಕಾರದ ಬೆಂಬಲ ಬೆಲ ಯೋಜನೆಯಡಿ ಫೆ.20 ರಿಂದ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪ್ರತಿ ಕ್ವಿಂಟಾಲ್‍ಗೆ ರೂ.5335 ದರ ನಿಗದಿ ಮಾಡಲಾಗಿದ್ದು, ಜಿಲ್ಲೆಯ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಯಿತು.
ಕೇಂದ್ರ ಸರ್ಕಾರ 2023ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 1 ಲಕ್ಷ 17 ಸಾವಿರ ಮೆಟ್ರಿಕ್ ಟನ್ ಟನ್ ಕಡಲೆ ಕಾಳುಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖರೀದಿಸಲು ಅನುಮತಿ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು 44539 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಕಾಳು ಬಿತ್ತನೆಯಾಗಿದ್ದು, 44539 ಟನ್ ಕಡಲೆ ಉತ್ಪಾದನೆ ನಿರೀಕ್ಷೆಯಿದೆ.
ಫೆಬ್ರವರಿ 20 ರಿಂದ ಮಾರ್ಚ್ 31ರ ವರೆಗೆ 45 ದಿನಗಳ ಕಾಲ ಕಡೆಲೆಕಾಳು ಮಾರಾಟದ ನೊಂದಣಿಗೆ ಅವಕಾಶವಿದೆ. ಫೆಬ್ರವರಿ 20 ರಿಂದ ಮೇ 15 ರವರಗೆ ಒಟ್ಟು 90 ದಿನಗಳ ಕಾಲ ಕಡಲೆಕಾಳು ಖರೀದಿ ನಡೆಯಲಿದೆ.
ರೈತರು ಫ್ರೂಟ್ಸ್ ದತ್ತಾಂಶ ಮಾಹಿತಿ ಹಾಗೂ ಆಧಾರ ಕಾರ್ಡ್ ಮಾಹಿತಿಯೊಂದಿಗೆ ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಗರಿಷ್ಠ 15 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಕಡಳೆಕಾಳು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಮಾರಾಟಕ್ಕೆ ನಿಗದಿ ಪಡಿಸಿದ ದಿನದಂದು ಖರೀದಿ ಕೇಂದ್ರಗಳಿಗೆ ಕಡಲೆ ಕಾಳುಗಳನ್ನು ತಂದು ಮಾರಾಟ ಮಾಡಬಹುದು.
ವಿಳಂಬವಾಗದ ರೀತಿಯಲ್ಲಿ ರೈತರ ನೊಂದಣಿ ಮಾಡಿ ಕಡೆಳೆಕಾಳು ಖರೀದಿಸಬೇಕು. ಪ್ರತಿದಿನವು ಸಾಗಾಣಿಕೆ ಗುತ್ತಿಗೆ ಪಡೆದ ಗುತ್ತಿಗೆದಾರರಿಂದ ಖರೀದಿಸಿದ ಕಡಲೆಕಾಳುಗಳನ್ನು ಚೀಲಗಳಲ್ಲಿ ತುಂಬಿ, ಯಂತ್ರದ ಸಹಾಯದಿಂದ ಹೊಲಿದು ಗೋದಾಮಿಗೆ ಸಾಗಿಸಬೇಕು. ಹಮಾಲಿ ಕೆಲಸ ನಿರ್ವಹಿಸುವವರಿಗೆ ಆಯಾ ದಿನದಂದೇ ಕೂಲಿ ನೀಡಬೇಕು.
ಉಗ್ರಾಣ ಸಂಸ್ಥೆಯವರು ಕಡಲೆಕಾಳುಗಳನ್ನು ಉಗ್ರಾಣದಲ್ಲಿ ಶೇಖರಿಸಿಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ದಾಸ್ತಾನು ಪಡೆದ ಕಡಲೆಕಾಳಿಗೆ ರಸೀದಿ ನೀಡಬೇಕು. ಯಾವುದೇ ದುರುಪಯೋಗ ಹಾಗೂ ರೈತರಿಂದ ದೂರು ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಡಲೆಕಾಳು ಖರೀದಿ ಕೇಂದ್ರಗಳ ಮಾಹಿತಿ: ಚಿತ್ರದುರ್ಗ ತಾಲೂಕಿನಲ್ಲಿ ಚಿತ್ರದುರ್ಗ ಟೌನ್ ಸಹಕಾರ ಸಂಘ,
ಮಾಡನಾಯಕನಹಳ್ಳಿ, ಚಿಕ್ಕಗೊಂಡನಹಳ್ಳಿ ಸಹಕಾರಿ ಸಂಘ ಹಾಗೂ ತುರವನೂರಿನ ಶ್ರೀ ಮಂಜುನಾಥ ಸ್ವಾಮಿ ರೈತ ಉತ್ಪಾದಕರ ಕಂಪನಿ, ಚಳ್ಳಕೆರೆ ತಾಲೂಕಿನಲ್ಲಿ ರಾಮಜೋಗಿಹಳ್ಳಿ, ಚಿಕ್ಕಮಧುರೆ ಸಹಕಾರ ಸಂಘ, ಹಿರಿಯೂರು ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಂ.ಸಿ, ಐಮಂಗಲ, ಬಬ್ಬೂರು, ಮರಡಿಹಳ್ಳಿ, ಸಹಕಾರ ಸಂಘಗಳು, ಹೊಳಲ್ಕೆರೆ ತಾಲೂಕಿನಲ್ಲಿ ರಾಮಗಿರಿ ಸಹಕಾರ ಸಂಘ, ಹೊಸದುರ್ಗ ತಾಲೂಕಿನ ಹೊಸದುರ್ಗ ರೋಡ್ ಸಹಕಾರ ಸಂಘ, ಮೊಳಕಾಲ್ಮೂರಿನ ಟಿ.ಎ.ಪಿ.ಸಿ.ಎಂ.ಸಿ ಸಹಕಾರ ಸಂಘಗಳಲ್ಲಿ ಕಡಲೆ ಕಾಳು ಖರೀದಿ ಜರುಗಲಿದೆ. ಕಡಳೆಕಾಳು ಮಾರಾಟ ಮಾಡಿದ ರೈತರಿಗೆ ನೇರವಾಗಿ ಡಿ.ಬಿ.ಟಿ ಮೂಲಕ ರೈತರ ಆಧಾರ್ ಸಂಖ್ಯೆ ಜೊಡಣೆಯಾದ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‍ಕುಮಾರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೆಶಕ ಎಸ್.ಎನ್.ಪತ್ತಾರ್, ಎಲ್ಲಾ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿಗಳು ಇದ್ದರು.