ಮಂಗಳೂರು: ಕುಂದಾಪುರದಲ್ಲಿ ಶುರುವಾದ ಹಿಜಾಬ್ ಗಲಾಟೆ ಇಡೀ ರಾಜ್ಯಕ್ಕೆ ಹಬ್ಬಿತ್ತು. ಅದಾದ ಬಳಿಕ ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರಕ್ಕೆ ಅವಕಾಶವಿಲ್ಲ ಎಂದು ಆದೇಶ ನೀಡಿತ್ತು. ಬಳಿಕ ಶಾಲಾ ಕಾಲೇಜು ಆಡಳಿತ ಮಂಡಳಿ, ಕೋರ್ಟ್ ಆದೇಶ ಗೌರವಿಸಿ, ಸಮವಸ್ತ್ರಕ್ಕೆ ಮಾತ್ರ ಅವಕಾಶ ಎಂಬ ಸೂಚನೆ ನೀಡಿತ್ತು.
ಆದರೆ ಪುತ್ತೂರಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಲೂ ಹಿಜಾಬ್ ಗಲಾಟೆ ಮುಂದುವರೆದಿದೆ. ಕಾಲೇಜು ಮಂಡಳಿ ಸೂಚನೆ ನೀಡಿದ್ದರು ಕೂಡ ಆರು ಜನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಬರುತ್ತಿದ್ದರು. ಈ ಸಂಬಂಧ ಸಾಕಷ್ಟು ಬಾರಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಆದರೂ ವಿದ್ಯಾರ್ಥಿನಿಯರು ಆ ಮಾತನ್ನು ಗಮನ ಕೊಟ್ಟಿಲ್ಲ.
ಉಪನ್ಯಾಸಕರ ಸಭೆ ಕರೆದು ಆ ಬಗ್ಗೆ ತೀರ್ಮಾನ ಮಾಡಿದ್ದಾರೆ. ಹಿಜಾಬ್ ಧರಿಸಲು ಬಿಟ್ಟರೆ ಮುಂದೆ ಗಲಾಟೆಯಾಗಬಹುದು ಎಂಬ ಆತಂಕವಿರುವ ಕಾರಣ, ಸಭೆಯಲ್ಲಿ ನಿರ್ಧರಿಸಿದಂತೆ ಆ ಆರು ಜನ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ.