ತುಮಕೂರು: ತೆಂಗು ಬೆಳೆಗಾರರಿಗೆ ಇಂದು ಸಂತಸದ ಸುದ್ದಿ ಸಿಕ್ಕಿದೆ. ಇಂದು ಬಂಪರ್ ಬೆಲೆಗೆ ಕೊಬ್ಬರಿ ಮಾರಾಟವಾಗಿದೆ. ಈ ಮೊದಲೆಲ್ಲಾ ಮಾರಾಟವಾಗದಂತೆ ಬೆಲೆಗೆ ಇಂದು ಮಾರಾಟವಾಗಿ ದಾಖಲೆ ಬರೆದಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಸರು ಪಡೆದಿದೆ. ಈ ಮಾರುಕಟ್ಟೆಯಲ್ಲಿ ದಾಖಲೆ ಮೊತ್ತಕ್ಕೆ ಇಂದು ಕೊಬ್ಬರಿ ಮಾರಾಟವಾಗಿದೆ.
ಮಾರುಕಟ್ಟೆಯಲ್ಲಿ ಹರಾಜಾದ ಕೊಬ್ಬರಿ ಬರೋಬ್ಬರಿ ಒಂದು ಕ್ವಿಂಟಾಲ್ ಗೆ 26,167 ರೂಪಾಯಿಗೆ ಮಾರಾಟವಾಗಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ವರ್ಷ ಕೊಬ್ಬರಿ ಕುಸಿತದಿಂದಾಗಿ ರೈತ ಕಂಗಾಲಾಗಿದ್ದ. ಬೆಂಬಲ ಬೆಲೆ ಬೇಕೆಂದು ಬೃಹತ್ ಪ್ರತಿಭಟನೆಯನ್ನೇ ಮಾಡಲಾಗಿತ್ತು. ಇದೀಗ ಈ ಬಾರಿ ಒಳ್ಳೆ ಬೆಲೆಯೇ ಸಿಕ್ಕಿದೆ.
ಕೇಂದ್ರ ಸರ್ಕಾರದಿಂದ 12 ಸಾವಿರ, ರಾಜ್ಯ ಸರ್ಕಾರದಿಂದ 1,500 ಸೇರಿ ರೈತರಿಗೆ 13,500 ರೂಪಾಯಿ ಸಿಕ್ಕಿದ್ದೆ ಬಹಳ ದೊಡ್ಡ ಹಣವಾಗಿತ್ತು. ಆದರೆ ಈ ವರ್ಷ ಒಳ್ಳೆ ಬೆಲೆ ಸಿಕ್ಕಿದೆ. ಕೇರಳ ಹಾಗೂ ತಮಿಳುನಾಡು ಭಾಗದಲ್ಲಿ ತೆಂಗು ಇಳುವರಿ ಕಡಿಮೆಯಾಗಿದ್ದು, ಆ ಭಾಗಕ್ಕೆಲ್ಲ ನಮ್ಮ ಕೊಬ್ಬರಿಯ ಅಗತ್ಯತೆ ಇತ್ತು. ಹೀಗಾಗಿ ಈಗ ಕೊಬ್ಬರಿಗೆ ಡಿಮ್ಯಾಂಡ್ ಜೋರಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಸದ್ಯ ರೈತರಿಗೆ ಹೆಚ್ಚು ಖುಷಿಯಾಗಿದೆ. ಹೀಗೆ ದರ ಏರಿಕೆಯಾಗುತ್ತಲೇ ಇರಲಿ ಎಂದೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ರೈತರ ಬಳಿ ಹೇಳಿಕೊಳ್ಳುವಷ್ಟು ಕೊಬ್ಬರಿ ಇಲ್ಲದೆ ಇರುವ ಕಾರಣ ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿ ರೈತ ಕಾಯ್ತಾ ಇದ್ದಾನೆ.






