ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸಬೇಕೆಂದು ಒತ್ತಾಯಿಸಿ ಕಳೆದ 224 ದಿನಗಳಿಂದ ವಾಲ್ಮೀಕಿ ಪೀಠದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಈ ವಿಚಾರವನ್ನು ಇಂದು ಸಿಎಂ ಬೊಮ್ಮಾಯಿ ಅವರು ಸದನದಲ್ಲಿ ಪ್ರಸ್ತಾಪ ಮಾಡಿದ್ದು, ವಾಲ್ಮೀಕಿ ಸ್ವಾಮೀಜಿಗಳು ತಮ್ಮ ಪ್ರತಿಭಟನೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.
ಪರಿಶಿಷ್ಟ ಪಂಗಡಗಳ ಮೀಸಲಾತಿ ಬಗ್ಗೆ ಎಲ್ಲರ ಅಭಿಪ್ರಾಯ ಪಡೆಯಬೇಕಿದೆ. ಈ ಸಂಬಂಧ ಶೀಘ್ರವೇ ಸರ್ವಪಕ್ಷ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಆ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು. ಈ ತೀರ್ಮಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅವರ ಭಾವನೆಗಳಿಗೆ ನಾವೂ ಸ್ಪಂದಿಸುತ್ತೇವೆ. ಮೀಸಲಾತಿ ಹೆಚ್ಚಳದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಕೂಡ ಬೆಂಬಲ ಸೂಚಿಸಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸರ್ವಪಕ್ಷ ಸಭೆ ನಡೆಸಲು ವಿಳಂಬ ಮಾಡಬಾರದು. ಆದಷ್ಟು ಬೇಗ ಕರೆದು ಒಂದು ನಿರ್ಣಯ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕುಮಾರಸ್ವಾಮಿ ಕೂಡ ಮಾತನಾಡಿ, ಸಿಎಂ ಹೇಳಿದಂತೆ ಆದಷ್ಟು ಬೇಗ ಸಭೆ ಕರೆಯಬೇಕು. ಸಮಾಜದ ಪ್ರಮುಖರನ್ನು ಸಭೆಗೆ ಆಹ್ವಾನಿಸಬೇಕು. 224 ದಿನದಿಂದಲೂ ಪರಮಪೂಜ್ಯರು ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.