ಬೆಂಗಳೂರು: ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಮಧ್ಯಾಹ್ನದ ವಿಮಾನವನ್ನು ಏರಿ ದೆಹಲಿ ತಲುಪಲಿದ್ದಾರೆ. ಇಂದು ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಎರಡು ಮುಖ್ಯ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ.
2023-24ರ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆಗೆ ಅನುದಾನ ಮೀಸಲಿಟ್ಟಿದ್ದಾರೆ. ಸುಮಾರು 5,300 ಕೋಟಿ ಅನುದಾನ ನೀಡಲಾಗಿದೆ. ಈ ಯೋಜನೆಯಿಂದಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ನೀರು ಹರಿಸುವ ವ್ಯವಸ್ಥೆ ಇದಾಗಿದೆ. ಹೀಗಾಗಿ ಈ ಯೋಜನೆಗೆ ಹಣ ಮೀಸಲಿಟ್ಟಿದ್ದಕ್ಕಾಗಿ ವರಿಷ್ಠರನ್ನು ಭೇಟಿಯಾಗಿ ಧನ್ಯವಾದ ತಿಳಿಸಲಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಸಿಡಿ ಕೇಸನ್ನು ಸಿಬಿಐಗೆ ವಹಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈಗಾಗಲೇ ಸಿಎಂ ಬೊಮ್ಮಾಯಿ ಅವರ ಬಳಿಯೂ ಚರ್ಚೆ ನಡೆಸಿದ್ದಾರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿಯೂ ಚರ್ಚೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ಕಾರಣ ರಮೇಶ್ ಜಾರಕಿಹೊಳಿ ಅವರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇನ್ನು ಬೊಮ್ಮಾಯಿ ಅವರು ವರಿಷ್ಠರಿಗೆ ಈ ಬಗ್ಗೆ ಚರ್ಚೆ ನಡೆಸಿ, ಸಿಬಿಐಗೆ ವಹಿಸುವುದರಿಂದ ಏನೆಲ್ಲಾ ಲಾಭ ಇದೆ ಎಂಬುದನ್ನು ಚರ್ಚೆ ನಡೆಸಲಿದ್ದಾರೆ. ಇಂದು ರಾತ್ರಿಯೇ ಅಲ್ಲಿಂದ ವಾಪಾಸ್ ಆಗಲಿದ್ದಾರೆ.