ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಇದರ ನಡುವೆ ರಾಜ್ಯಪಾಲರ ಕಚೇರಿಯಿಂದ ಈಗಾಗಲೇ ಮೂರು ಬಾರಿ ನೋಟೀಸ್ ನೀಡಲಾಗಿದೆ. ಹೀಗಾಗಿ ಆ ನೋಟೀಸ್ ಗೆ ಇಂದು ಉತ್ತರ ನೀಡಿದ್ದಾರೆ.
ರಾಜ್ಯಪಾಲರು ನೀಡಿರುವ ಶೋಕಾಸ್ ನೋಟೀಸ್ ಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದು, ರಾಜ್ಯಪಾಲರಿಗೆ ಸಮರ್ಪಕವಾದ ದಾಖಲೆಗಳನ್ನು ಒದಗಿಸಿದ್ದಾರೆ. ಪ್ರತ್ಯೇಕವಾಗಿ ಹಾಗೂ ವೈಯಕ್ತಿಕವಾಗಿ ರಾಜ್ಯಪಾಲರಿಗೆ ದಾಖಲೆ ಸಮೇತ ಉತ್ತರ ನೀಡಿದ್ದಾರೆ. ತಮಗೇ ನೇರವಾಗಿ ನೋಟೀಸ್ ನೀಡಿದರ ಪರಿಣಾಮ, ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ರಾಜಭವನಕ್ಕೆ ಹೋಗಿ ವಿವರಣೆ ನೀಡಿದ್ದಾರೆ. ನೋಟೀಸ್ ನಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಮೂಡಾ ಸೈಟ್ ಹಂಚಿಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಯಾವುದೇ ಪ್ರಭಾವವನ್ನು ಬಳಸಿಲ್ಲ. ಕಾನೂನಾತ್ಮಕವಾಗಿಯೇ ಪತ್ನಿಗೆ ಸೈಟ್ ಹಂಚಿಕೆಯಾಗಿದೆ ಎಂದು ಹೇಳಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಾರೆ.
ಇದೇ ವಿಚಾರದ ಬಗ್ಗೆ ಮೈಸೂರಿನಲ್ಲಿಯೂ ಮಾತನಾಡಿದ ಅವರು, ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ನೀಡಿದ್ದರು. ಸಿಎಂ ಸ್ಥಾನದಲ್ಲಿ ಇರುವ ತನಕ ಬದಲಿ ಭೂಮಿ ಕೊಡಬೇಡಿ ಎಂದು ನಾನೇ ಹೇಳಿದ್ದೆ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆ. 2021ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅರ್ಜಿ ಹಾಕಿದ್ದರು. ಆಗ ಕಾನೂನಾತ್ಮಕವಾಗಿಯೇ ಭೂಮಿಯನ್ನು ನೀಡಿದ್ದಾರೆ. ನಾನು ಯಾವುದೇ ಪ್ರಭಾವ ಬಳಸಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ, ಇದೆ ಬೇರೆ ಎಂದಿದ್ದಾರೆ.