ಬೆಂಗಳೂರು: ಇಂದು 75ನೇ ಗಣರಾಜ್ಯೋತ್ಸವ ಹಿನ್ನೆಲೆ ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದು, ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ರೈತರಿಗೂ ಸಿಹಿ ಸುದ್ದಿ ನೀಡಿದ್ದಾರೆ.
ಬರದಿಂದ ಬಾಧಿತರಾದವರಿಗೆ ರಾಜ್ಯ ಸರ್ಕಾರವೇ ಬೆಳೆ ಪರಿಹಾರವೆಂದು 2000ರೂಪಾಯಿ ವರೆಗೆ ತಾತ್ಕಾಲಿಕ ಪರಿಹಾರವಾಗಿ ಘೋಷಣೆ ಮಾಡಿದೆ. ಈಗಾಗಲೇ 550 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ವಾರದ ಒಳಗೆ ಮೊದಲ ಕಂತಿನ ಪರಿಹಾರವಾಗಿ ರೈತರಿಗೆ ತಲುಪಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಸಂವಿಧಾನದ ಬಗ್ಗೆ ಮಾತನಾಡಿ, ವಿಶ್ವಕ್ಕೆ ಮಾದರಿಯಾದಂತ ಇಂಥಹ ಸಂವಿಧಾನ ಕೊಟ್ಟಂತ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಭಾರತವೂ ತನ್ನನ್ನು ತಾನೂ ಆಳಿಕೊಳ್ಳುವ ಸಂವಿಧಾನ ಬಂದು ಇಂದಿಗೆ 75 ವರ್ಷ ತುಂಬುತ್ತಿವೆ. ಸಂವಿಧಾನವೇ ನಮ್ಮ ಧರ್ಮ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ ಎಂದು ನಂಬಿಕೊಂಡು ಬಂದಿರುವ ನಮ್ಮ ಸರ್ಕಾರ, ಜಾತಿ-ಧರ್ಮಗಳ ಬೇಧವಿಲ್ಲದೆ ಸಂಪತ್ತು, ಅವಕಾಶಮತ್ತು ಅಧಿಕಾರದಲ್ಲಿಸರ್ವರಿಗೂ ಸಮಪಾಲು ಸಿಗಬೇಕೆಂದು ಸರ್ವೋದಯದ ಉದಾತ್ತ ಉದ್ದೇಶವನ್ನು ಹೊಂದಿದೆ. ಸಂವಿಧಾನ ಎಂಬುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮವಿಲ್ಲದ ಜೀವ ಇದ್ದಂತೆ. ಇತ್ತಿಚೆಗೆ ಅಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ಇದನ್ನು ಪ್ರಜಾಪ್ರಭುತ್ವದ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ಕೂಡ ಧ್ವನಿಗೂಡಿಸುತ್ತೇನೆ ಎಂದಿದ್ದಾರೆ.