ಬೆಂಗಳೂರು: ರಾಜ್ಯಾದ್ಯಂತ ಸರಿಯಾದ ಸಮಯಕ್ಕೆ ಮುಂಗಾರು ಮಳೆ ಬಾರದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಕೇ ಕೇಂದ್ರ ಸರ್ಕಾರದಿಂದ ಬರ ತಂಡ ಅಧ್ಯಯನ ಕೂಡ ನಡೆಸಿಕೊಂಡು ಹೋಗಿದೆ. ಆದರೂ ಒಂದೇ ಒಂದು ಪರಿಹಾರವನ್ನು ನೀಡಿಲ್ಲ. ಇದೀಗ ಕೇಂದ್ರದಿಂದ ಹಣ ಬರುವುದಕ್ಕೂ ಮುನ್ನವೇ ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನೀಡುವ ತನಕ ಕಾತುವುದಕ್ಕೆ ಸಾಧ್ಯವಿಲ್ಲ ಎಂದು ನಿರ್ಧಾರ ಮಾಡಿರುವ ರಾಜ್ಯ ಸರ್ಕಾರ ಮೊದಲ ಕಂತು ಅರ್ಹರಿಗೆ ಎರಡು ಸಾವಿರ ರೂಪಾಯಿ ನೀಡಲು ನಿರ್ಧರಿಸಿದೆ. ಈ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮೊದಲನೇ ಕಂತಿನಲ್ಲಿ 2 ಸಾವಿರ ರೂಪಾಯಿ ಹಣವನ್ನು ನೀಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ನೀಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಇಲ್ಲ. ಕೇಂದ್ರಕ್ಕೆ ಬರೆದ ಪತ್ರಗಳಿಗೂ ಉತ್ತರವಿಲ್ಲ. ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಸ್ ಕೊಟ್ಟರೂ ಸಾಕು. ಕೇಂದ್ರದ ತಂಡ 4/10 ರಿಂದ 9/10 ರ ವರೆಗೆ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿ ನೀಡಿದೆ. ನಾವೆಲ್ಲಾ ಕೇಂದ್ರ ತಂಡವನ್ನು ಭೇಟಿ ಮಾಡಿ ಚರ್ಚಿಸಿ ಬರದ ಸ್ಥಿತಿ ವಿವರಿಸಿದ್ದೇವೆ. ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲದ ಸ್ಥಿತಿ ಇದೆ. 4,663 ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಇವತ್ತಿನವರೆಗೂ ಕೇಂದ್ರ ಸಭೆಯನ್ನೇ ನಡೆಸಿಲ್ಲ. ಸಮಯ ಕೇಳಿದರೂ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದಿದ್ದಾರೆ.