ಮೈಸೂರು: ಐತಿಹಾಸಿಕ ಮೈಸೂರು ದಸರಾಗೆ ಇಂದು ವಿಧ್ಯುಕ್ತ ತೆರೆ ಬೀಳಲಿದೆ. ಸಂಜೆ ವೇಳೆಗೆ ಜಂಬೂ ಸವಾರಿ ನೆರವೇರುವ ಮೂಲಕ ದಸರಾ ಮುಕ್ತಾಯವಾಗಲಿದೆ. ಅದಕ್ಕೂ ಮುನ್ನ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿದೆ. ಸಿಎಂ ಸಿದ್ದರಾಮಯ್ಯ ಅವರು ಪೂಜೆ ನೆರವೇರಿಸಿದ್ದಾರೆ.
ಕೋಟೆ ಆಂಜನೇಯ ದೇಗುಲದ ಬಳಿ ನಂದಿ ಧ್ವಜ ಪೂಜೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿದ್ದು, ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಸಚಿವರು ಸಾಥ್ ನೀಡಿದ್ದಾರೆ. ಪೂಜೆ ನೆರವೇರಿಸಿ ತಾಯಿ ಚಾಮುಂಡಿ ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎಂದು ಬೇಡಿಕೊಂಡಿದ್ದಾರೆ.
ಪೂಜೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಸರಾ ಅಂದ್ರೆ ನಾಡಹಬ್ಬ, ಜನರ ಹಬ್ಬ ಇದು. ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದೆ ನಮ್ಮ ಸರ್ಕಾರ. ಆದರೆ ಬರದ ಛಾಯೆಯಿಂದ ಬಹಳ ಅದ್ದೂರಿಯಾಗಿ ಮಾಡುವ ಬದಲು ಸಾಂಪ್ರಾದಾಯಿಕವಾಗಿ ಮಾಡಿ ಎಂದು ಮಹದೇವಪ್ಪ ಬಳಿ ಹೇಳಿದ್ದೆವು. ದಸರಾ ನೋಡುವುದಕ್ಕೆ ದೇಶ, ವಿದೇಶದಿಂದ ಬಂದಿದ್ದಾರೆ. ಸುಮಾರು ಹತ್ತು ಲಕ್ಷಕ್ಕು ಹೆಚ್ಚು ಜನ ದಸರಾ ನೋಡುವುದಕ್ಕೆ ಬಂದಿದ್ದಾರೆ. ಈಗಾಗಲೇ ಉದ್ಘಾಟನೆ ದಿನವೇ ಹೇಳಿದ್ದೀನಿ. ವಿಜಯನಗರ ಅರಸರು ಮಾಡುತ್ತಿದ್ದಂತ ಹಬ್ಬ ಇದು. ಅಂಬಾರಿ ಮೇಲೆ ಚಾಮುಂಡೇಶ್ವರಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ವಿಶೇಷ ಏನಪ್ಪ ಅಂದ್ರೆ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳು ಜನರಿಗೆ ತಲುಪಿದೆ. ಜನತೆಗೆ ಈ ಎಲ್ಲವನ್ನು ತಿಳಿಸುವ ಪ್ರಯತ್ನ ಮಾಡಿದ್ದೇವೆ. ಇದು ಜನರ ಹಬ್ಬವಾಗಿದೆ. ನಿನ್ನೆಯೆಲ್ಲಾ ಏರ್ ಶೋ ಇತ್ತು. ನಾವೂ ಫ್ರೀ ಬಸ್ ಮಾಡಿರುವುದರಿಂದ ದಸರಾ ಉತ್ಸವದಲ್ಲಿ ಹೆಚ್ಚು ಜನ ಭಾಗಿಯಾಗಿದ್ದಾರೆ ಎಂದಿದ್ದಾರೆ.