ಉತ್ತರ ಕನ್ನಡ: ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಸಾಕಷ್ಟು ಕಡೆ ಗುಡ್ಡ ಕುಸಿತ ಉಂಟಾಗಿದೆ. ಸಾವು-ನೋವುಗಳು ಸಂಭವಿಸಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನಾಲಕೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಅಲ್ಲಿನ ಸ್ಥಿತಿಗತಿಯನ್ನು ಅರಿಯಲಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಕಳೆದ ಕೆಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅತಿಹೆಚ್ಚು ಹಾನಿಗೆ ಒಳಗಾದ ಉತ್ತರ ಕನ್ನಡ ಜಿಲ್ಲೆಯ ಆಯ್ದ ಸ್ಥಳಗಳಿಗೆ ನಾಳೆ ಭೇಟಿನೀಡಿ, ಪರಿಹಾರ ಕಾರ್ಯದ ಪರಿಶೀಲನೆ ನಡೆಸಿ, ಸಂತ್ರಸ್ತರ ಅಹವಾಲುಗಳನ್ನು ಆಲಿಸಲಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗೆ ನಮ್ಮ ಸರ್ಕಾರವು ಈಗಾಗಲೇ ರೂ.775 ಕೋಟಿ ಹಣ ನೀಡಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು’ ಎಂದಿದ್ದಾರೆ.
ಇನ್ನು ಮಳೆಯ ಆರ್ಭಟ ಇಂದಿಗೂ ನಿಂತಿಲ್ಲ. ರಾಜ್ಯದ ಹಲವೆಡೆ ನಿರಂತರವಾಗಿ ಮಳೆಯಾಗುತ್ತಲೇ ಇದೆ. ಅದರಲ್ಲೂ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮಳೆಗಾಲದಲ್ಲಿ ಚಿಕ್ಕಮಗಳೂರು ಭಾಗಕ್ಕೆ ಪ್ರವಾಸಕ್ಕೆಂದು ಹೋಗುವವರೇ ಹೆಚ್ಚು. ಆದರೆ ಅಲ್ಲಿನ ಸ್ಥಳೀಯರ ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಲ್ಲತ್ತಗಿರಿಯಲ್ಲಂತೂ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ಪ್ರವಾಸಕ್ಕೆ ಎಂದು ಚಿಕ್ಕಮಗಳೂರು ಕಡೆಗೆ ಬರುವ ದುಸ್ಸಾಹಸಕ್ಕೆ ಕೈಬಹಾಕಬೇಡಿ. ಎಲ್ಲಾ ಕಡೆ ನೀರಿನ ಮಟ್ಟ ತುಂಬಿ ಹರಿಯುತ್ತಿದೆ ಎಂದಿದ್ದಾರೆ.