ಉತ್ತರ ಕನ್ನಡ : ಜಿಲ್ಲೆಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿತವಾಗುತ್ತಲೇ ಇದೆ. ಈಗಾಗಲೇ ಗುಡ್ಡ ಕುಸಿತದಿಂದ ಸಾಕಷ್ಟು ಸಾವು ನೋವುಗಳು ಆಗಿವೆ. ನಾಪತ್ತೆಯಾದವರ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ. ಲಾರಿಯೊಂದು ಮಣ್ಣಿನಲ್ಲಿ ನಾಪತ್ತೆಯಾಗಿದ್ದು, ಇನ್ನು ಪತ್ತೆಯಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಜನ ಆತಂಕದಲ್ಲಿಯೇ ಬದುಕುತ್ತಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದ ಗುಡ್ಡ ಕುಸಿತದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸುರಿಯುವ ಮಳೆಯಲ್ಲಿಯೇ ರೇನ್ ಕೋಟ್ ಧರಿಸಿ ಭೇಟಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು, ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ.
ಈಗಾಗಲೇ ಗುಡ್ಡ ಕುಸಿತದಿಂದಾನೇ ರಾಷ್ಟ್ರೀಯ ಹೆದ್ದಾರಿ ಕೂಡ ಕ್ಲೋಸ್ ಆಗಿದೆ. ಅದರ ಪಕ್ಕದಲ್ಲಿಯೇ ಗುಡ್ಡ ಕುಸಿತಗೊಳ್ಳುವ ಸಾಧ್ಯತೆ ಇದೆ. ಸುತ್ತ ಮುತ್ತಲ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿರುವ ಮೃತದೇಹಗಳ ಪತ್ತೆ ಮಾಡಲಾಗುತ್ತಿದ್ದು, ಮಳೆ ಕೂಡ ಅಡ್ಡಿಯಾಗುತ್ತಿದೆ. ಮೃತದೇಹಗಳ ಪತ್ತೆ, ಮುಂದಿನ ಕಾರ್ಯಾಚರಣೆ ಹೇಗೆ ಸಾಗಬೇಕು ಎಂಬುದೆಲ್ಲವನ್ನು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ತಿಳಿದುಕೊಂಡಿದ್ದಾರೆ. ಆದಷ್ಟು ಬೇಗ ಕಾರ್ಯಾಚರಣೆಪೂರ್ಣಗೊಳಿಸಿ, ಲಾರಿಯಲ್ಲಿ ಸಿಲುಕಿರುವ ವ್ಯಕ್ತಿಯನ್ನು ಆದಷ್ಟು ಬೇಗ ಕಾಪಾಡಿ ಎಂದು ಸೂಚಿಸಿ ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಕೃಷ್ಣ ಭೈರೇಗೌಡ, ಮಂಕಾಳು ವೈದ್ಯ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಇನ್ನು ಅಂಕೋಲಾ ತಾಲೂಕಿನ ಶಿರೂರಿನ ಉಳುವರೆ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಿದ್ದಾರೆ. ಇಲ್ಲಿ ಗುಡ್ಡ ಕುಸಿತದಿಂದ 39ಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡಿದ್ದರು. ಹಲವರು ಸಾವನ್ನಪ್ಪಿದ್ದಾರೆ. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿದ ವಿಜಯೇಂದ್ರ ಅವರಿಗೆ ಸ್ಥಳೀಯರು ಮನವಿ ಮಾಡಿಕೊಂಡಿದ್ದು, ಬೇರೆ ಕಡೆಗೆ ಸ್ಥಳಾಂತರಿಸಿ ಎಂದಿದ್ದಾರೆ. ಸ್ಥಳೀಯರಿಗೆ ಸಮಾಧಾನ ಮಾಡಿದ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.