ಈ ಸಲ ಕಪ್ ನಮ್ದೆ ಅಂತಿದ್ದಾರೆ ಸಿಎಂ ಸಿದ್ದರಾಮಯ್ಯ…!

 

ಬೆಂಗಳೂರು: ಕನ್ನಡಿಗರ ಮನಸ್ಸನ್ನ ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆ ಸ್ಮೃತಿ ಮಂದಾನ. ನಿನ್ನೆ ಭಾನುವಾರ ಇಡೀ ಕನ್ನಡಿಗರ ಕಾತುರಕ್ಕೆ ಕಾರಣವಾಗಿ, ಜೈಕಾರಕ್ಕೆ ನಾಂದಿ ಹಾಡಿದ್ದು ಇದೇ ಸ್ಮೃತಿ ಮಂದಾನ ಅಂಡ್ ಟೀಂ. ಮಹಿಳಾ ಆರ್ ಸಿಬಿ ಟೀಂ ನಿನ್ನೆ ಕಪ್ ಗೆದ್ದು ಬೀಗಿದೆ. ಇದು ಕನ್ನಡಿಗರಿಗೆ ಸಂಭ್ರಮಕ್ಕೆ ಕಾರಣವಾಗಿದೆ.

ಡಿಸಿಯನ್ನು ಆರ್ಸಿಬಿ ಟೀಂ ಎಂಟು ವಿಕೆಟ್ ಗಳಿಂದ ಸೋಲಿಸಿದೆ. WPL ಪ್ರಶಸ್ತಿ ಗೆದ್ದು ಕನ್ನಡಿಗರ ಹೃದಯವನ್ನು ಕದ್ದಿದೆ. ಈ ಸಲ ಕಪ್ ನಮ್ಮದೇ ಎಂಬ ಆಸೆಯನ್ನು ಮಹಿಳಾ ಟೀಂ ಈಡೇರಿಸಿದೆ. ಹೆಮ್ಮೆಯಿಂದ ಕಪ್ ನಮ್ಮದಾಯ್ತು ಎಂದು ಹರ್ಷ ಪಡುತ್ತಿರುವ ಕನ್ನಡಿಗರಿಗೆ ಈಗ ಹುಡುಗರ ಮೇಲೆ ಚಿತ್ತ ನೆಟ್ಟಿದೆ‌. ಹುಡುಗಿಯರು ಗೆದ್ದಾಯ್ತು, ಹುಡುಗರು ಕಪ್ ಎತ್ತುತ್ತೀರಾ ಎಂಬ ಪ್ರಶ್ನೆ ಶುರುವಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಹಿಳಾ ಕ್ರಿಕೆಟರ್ಸ್ ಗಳಿಗೆ ಅಭಿನಂದನೆ ತಿಳಿಸಿದ್ದು, ಆರ್ಸಿಬಿ ಹುಡುಗರ ಆಟದ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ‘ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್.ಸಿ.ಬಿ ತಂಡ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯ ಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್.ಸಿ.ಬಿ ಅಭಿಮಾನಿಗಳ ದಶಕಗಳ ಕನಸು ಇಂದು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು.
ಈ ಸಲ ಕಪ್ ನಮ್ದೆ’ ಎಂದು ಸಂತಸದಿಂದ ಮೆಸೇಜ್ ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *