ದೆಹಲಿ: ಸಿಎಂ ಸಿದ್ದರಾಮಯ್ಯ ಅವರು ದೆಹಲಿಯ ಪ್ರವಾಸದಲ್ಲಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಲ್ಲೂ ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟದ ಪುನರ್ ರಚನೆ ವಿಚಾರಕ್ಕೆ ಒಂದಷ್ಟು ಶಾಸಕರು ಕಾಯ್ತಾ ಇದ್ದಾರೆ. ಸಚಿವ ಸ್ಥಾನದ ಆಕಾಂಕ್ಷೆಯಲ್ಲಿದ್ದಾರೆ. ಆ ವಿಚಾರವನ್ನೇ ಖರ್ಗೆ ಅವರ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಅವರ ಸೂಚನೆಯ ಮೇರೆ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಕಾಂಗ್ರೆಸ್ ಹೈಕಮ್ಯಾಂಡ್ ಸಂಪುಟ ಪುನರ ರಚನೆಗೆ ಸೂಚಿಸಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣವಾಗಲಿ ಎಂದು ನಾನೇ ಹೇಳಿದ್ದೆ. ನವಂಬರ್ 20 ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣವಾಗುತ್ತಿದೆ. ಹಾಗಾಗಿ ಈಗ ಭೇಟಿ ಮಾಡುತ್ತೇನೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಮೂಲಕ ರಾಜ್ಯದ ಕ್ಯಾಬಿನೆಟ್ ಪುನರ್ ರಚನೆಯಾಗುವುದನ್ನು ಸಿಎಂ ಸಿದ್ದರಾಮಯ್ಯ ಅವರೇ ಖಚಿತಪಡಿಸಿದ್ದಾರೆ.
ಈ ಮೂಲಕ ಸಚಿವ ಸಂಪುಟದ ಆಕಾಂಕ್ಷಿಗಳಿಗೆ ಆಸೆ ಮತ್ತೆ ಗರಿಗೆದರಿದಂತೆ ಆಗಿದೆ. ಹಲವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯು ಇದೆ. ಇನ್ನು ಹಲವರು ಸಂಪುಟಕ್ಕೆ ಎಂಟ್ರಿಯಾಗುವ ಮೂಲಕ ತಮ್ಮ ಸಚಿವ ಸ್ಥಾನದ ಆಸೆಯನ್ನ ಈಡೇರಿಸಿಕೊಳ್ಳಲಿದ್ದಾರೆ. ಯಾವಾಗ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ.
