ಮೈಸೂರು: ನಾಡ ಹಬ್ಬ ಮೈಸೂರು ದಸರಾ ಅದ್ದೂರಿಯಾಗಿ ಸಾಗಿದೆ. ಇಂದು ದಸರಾಗೆ ವಿದ್ಯುಕ್ತ ತೆರೆ ಬೀಳಲಿದೆ. ಇಡೀ ರಾಜ್ಯವೇ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಂತ ಜಂಬೂ ಸವಾರಿ ಹೊರಟಿದೆ. 414ನೇ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಅಭಿಮನ್ಯು ತಾಯಿಯನ್ನು ಹೊತ್ತು, ರಾಜಬೀದಿಯಲ್ಲಿ ಸಾಗುತ್ತಿದ್ದಾನೆ.
750 ಕೆಜಿ ಅಂಬಾರಿ ಹೊತ್ತ ಅಭಿಮನ್ಯು, ರಾಜಬೀದಿಯಲ್ಲಿ ಗಜಗಾಂಭೀರ್ಯದಿಂದ ಸಾಗಿದ್ದಾನೆ. ಈ ಮೂಲಕ 5 ಕಿ.ಮೀಟರ್ ನಡೆದು, ಬನ್ನಿಮಂಟಪ ತಲುಪಲಿದ್ದಾನೆ. ಅಲ್ಲಿ ಅಂಬಾರಿಗೆ ವಿಶೇಷ ಪೂಜೆ ನೆರವೇರಲಿದೆ. ಅಭಿಮನ್ಯು ಜೊತೆಗೆ ಲಕ್ಷ್ಮೀ, ವಿಜಯಾ, ಕುಮ್ಕಿ, ಹಿರಣ್ಯ, ವರಲಕ್ಷ್ಮೀ, ಮಹೇಂದ್ರ, ಭೀಮ ಸೇರಿದಂತೆ ಒಟ್ಟು ಹದಿನಾಲ್ಕು ಆನೆಗಳು ಹೆಜ್ಜೆ ಹಾಕುತ್ತಿವೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ತಾಯಿಯನ್ನು ಹಲವು ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದೆ.
ತಾಯಿಯನ್ನು ಹೊತ್ತು ಸಾಗುತ್ತಿರುವ ಅಭಿಮನ್ಯುಗೂ, ಅದಕ್ಕೆ ಸಾಥ್ ನೀಡುತ್ತಿರುವ ಆನೆಗಳಿಗೂ ಹೂವಿನ ಅಲಂಕಾರ ಮಾಡಲಾಗಿದೆ. ಲಕ್ಷಾಂತರ ಜನ ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಅರಮನೆ ನಗರಿಯಲ್ಲಿ ನೆರೆದಿದ್ದಾರೆ. ಸುಮಾರು ದೂರ ಕ್ರಮಿಸುವ ಈ ಮೆರವಣಿಗೆಗೆ ನಾಡಿನ ಜನ ಭಕ್ತಿ ಭಾವದಿಂದ ನಮಿಸಿದ್ದಾರೆ. ದಸರಾ ಕಣ್ತುಂಬಿಕೊಂಡು ಪಾವನರಾಗಿದ್ದಾರೆ.