ಸಿದ್ದರಾಮಯ್ಯ ಅವರು ಸಿಎಂ ಆದಾಗಿನಿಂದ ಬಡವರು, ಮಧ್ಯಮವರ್ಗದವರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸರ್ಕಾರ ರಚನೆಗೂ ಮುನ್ನವೇ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದಾರೆ. ಸಿದ್ದರಾಮಯ್ಯ ಅವರು ಎಷ್ಟೋ ವಿಚಾರದಲ್ಲಿ ಮಾತಿಗೆ ತಪ್ಪದವರು ಎಂದೇ ಖ್ಯಾತಿ ಪಡೆದಿದ್ದಾರೆ. ಇದೀಗ ಪತ್ರಕರ್ತರ ವಿಚಾರದಲ್ಲೂ ಅದೇ ಆಗಿದೆ.
ಗ್ರಾಮೀಣ ಭಾಗದಲ್ಲೂ ಪತ್ರಕರ್ತರಿದ್ದಾರೆ. ಅವರೆಲ್ಲಾ ಓಡಾಡುವುದಕ್ಕೆ ಬಸ್ ನಲ್ಲಿ ಉಚಿತ ಪ್ರಯಾಣ ಸಿಕ್ಕರೆ ಸಾಕಷ್ಟು ಅನುಕೂಲವಾಗಲಿದೆ. ಹೀಗಾಗಿ ಇದರ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಇದೀಗ ಅದಕ್ಕೆ ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಪತ್ರಕರ್ತರ ದಶಕಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಬಾಸ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ರೆ ಒತ್ತಿದ್ದಾರೆ.
ಗ್ರಾಮೀಣ ಪತ್ರಕರ್ತರ ಉಚಿತ ಬಾಸ್ ಜಾರಿಗೆ ಅಧಿಕೃತ ಆದೇಶ ಹೊರ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದಿದ್ದಾರೆ. ಉಚಿತ ಬಸ್ ಪಾಸ್ ಬೇಡಿಕೆಯನ್ನು ದಡ ಮುಟ್ಟಿಸುವಲ್ಲಿ ಯಶಸ್ವಿಯಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ನಿರಂತರ ಶ್ರಮಕ್ಕೆ ಸಾರ್ಥಕತೆ ದೊರೆತಿದೆ.
ಎಷ್ಟೋ ಪತ್ರಕರ್ತರು ಸುದ್ದಿ ಮಾಡುವುದಕ್ಕೆ ಗ್ರಾಮೀಣ ಭಾಗದಲ್ಲಿ ಬಸ್ ಗಳ ಮೇಲೂ ಅವಲಂಭಿಸಿರುತ್ತಾರೆ. ಜಿಲ್ಲೆಯ ತಾಲೂಕುಗಳಿಗೆ ಸಂಚರಿಸುವಾಗ ಬೈಕ್ ನಲ್ಲಿ ಓಡಾಡುವುದಕ್ಕಿಂತ ಬಸ್ ನಲ್ಲಿ ಹೋಗುವುದೇ ಉತ್ತಮವಾಗಿರುತ್ತದೆ. ಅದರಲ್ಲೂ ನಗರ ಭಾಗದಲ್ಲಿ ಕೆಲಸ ಮಾಡಯವ ಪತ್ರಕರ್ತರಿಗೆ ವಾಹನದ ಸೌಲಭ್ಯ ಇರುತ್ತದೆ. ಆದರೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅಷ್ಟೊಂದು ಸೌಲಭ್ಯಗಳು ಇರುವುದಿಲ್ಲ. ಹೀಗಾಗಿ ಈಗ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ನಿರ್ಧಾರದಿಂದ ಪತ್ರಕರ್ತರು ಖುಷಿಯಾಗಿದ್ದಾರೆ.