ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ನಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಕಷ್ಟು ಕೇಸ್ ಗಳು ಕೂಡ ದಾಖಲಾಗುತ್ತಿವೆ. ಹೀಗಾಗಿ ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊಸ ಕಾರ್ಯಕ್ರಮಕ್ಕೆ ಕೈ ಹಾಕಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಅನ್ನೋದು ವಿಶೇಷ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೈಬರ್ ಸುರಕ್ಷಿತ ಕರ್ನಾಟಕ ಅನ್ನೋ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಡಾ.ನಾರಾಯಣಗೌಡ, ಸೈಬರ್ ಸುರಕ್ಷಿತ ಅಭಿಯಾನದ ರಾಯಬಾರಿ ನಟ ರಮೇಶ್ ಅರವಿಂದ್, ಕ್ರೀಡಾ ಇಲಾಖೆ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸೋದೆ ಇದರ ಉದ್ದೇಶವಾಗಿದೆ. ಈ ವೇಳೆ ಮಾತನಾಡಿದ ರಾಯಬಾರಿ ನಟ ರಮೇಶ್ ಅರವಿಂದ್, ಮೊಬೈಲ್ ಬಳಸದವರು ಈಗ ಯಾರು ಇಲ್ಲ. ಅದರಿಂದ ಅನುಕೂಲವೂ ಆಗುತ್ತಿದೆ, ಅನಾನುಕೂಲವೂ ಆಗುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಿದ್ರೆ ಸೈಬರ್ ಕ್ರೈಂ ತಡೆಯಬಹುದು. ಜಾಗೃತಿ ಮೂಡಿಸಬೇಕು ಎಂದಿದ್ದಾರೆ.
ಇತ್ತೀಚೆಗೆ ರಮೇಶ್ ಅರವಿಂದ ಅವರ ಸಿನಿಮಾವೊಂದರಲ್ಲೂ ಇದೇ ವಿಷಯ ಪ್ರಸ್ತಾಪವಾಗಿತ್ತು. ಸೈಬರ್ ಕ್ರೈಂ ಕುರಿತ ಸಿನಿಮಾದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ರು. ಇದೀಗ ಆ ಸಂಬಂಧ ದೇಶದಲ್ಲೇ ಮೊದಲ ಪ್ರಯೋಗ ಶುರುವಾಗಿದೆ.