ರಾಯಚೂರು: ಸಿ ಎಂ ಇಬ್ರಾಹಿಂ ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಅಧಿಕೃತವಾಗಿ ತಮ್ಮ ಹಳೇ ಪಕ್ಷಕ್ಕೆ ಮರಳಿದರು. ಜೆಡಿಎಸ್ ಸೇರಿದಾಗಿನಿಂದ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಇಬ್ರಾಹಿಂ, ಎಲ್ಲಾ ಕಾರ್ಯಕ್ರಮದಲ್ಲಿ ಅಷ್ಟೇ ಖುಷಿಯಲ್ಲಿ ಭಾಗವಹಿಸುತ್ತಿರುತ್ತಾರೆ. ಇದೀಗ ರಾಯಚೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದು, ಜೆಡಿಎಸ್ ನಿಂದ ಒಂದು ರೂಪಾಯಿ ಕೂಡ ಪಡೆಯುತ್ತಿಲ್ಲ ಎಂದಿದ್ದಾರೆ.
ಕಾರು ನನ್ನದೇ, ಡಿಸೇಲ್ ನನ್ನದೆ, ದಾಸೋಹದಲ್ಲಿ ಊಟ ಮಾಡಿಕೊಳ್ಳುತ್ತೇನೆ. ಆದರೆ ಜೆಡಿಎಸ್ ಪಕ್ಷದಿಂದ ಒಂದು ರೂಪಾಯಿ ಕೂಡ ಪಡೆದಿಲ್ಲ. ಇನ್ನು ಮೂರು ತಿಂಗಳಲ್ಲಿ ಹಲವರು ಜೆಡಿಎಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂದು ಹೊಸ ವಿಚಾರ ಹೇಳಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್, ಬಿಜೆಪಿ ಬಗ್ಗೆ ಮಾತನಾಡಿದ್ದು, ಜೆಡಿಎಸ್ ಪಕ್ಷ ನಂಬರ್ ಒನ್ ಸ್ಥಾನಕ್ಕೆ ಬರಲಿದೆ. ಬಿಜೆಪಿ ಎರಡನೇ ಸ್ಥಾನಕ್ಕೆ ಬಂದರೆ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರಲಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಬಿಜೆಪಿ 40 ಪರ್ಸೆಂಟ್, ಕಾಂಗ್ರೆಸ್ 20 ಪರ್ಸೆಂಟ್ ಗಾಗಿ ಜಗಳವಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಅಧಿಕಾರ ನೀಡುತ್ತಾರೆ. ಒಂದು ವೇಳೆ ಸಂಪೂರ್ಣ ಬಹುಮತ ನೀಡಿದರೆ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡುವುದರ ಜೊತೆಗೆ, ನೀರಾವರಿ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಎಂದಿದ್ದಾರೆ.